ಒಣ ಪ್ರತಿಷ್ಠೆ ತೋರುವ ಉತ್ತರ ಕುಮಾರರಿಗೆ ಮಾದರಿಯಾದ ಸೋಲ್ಜರ್ಸ್
ಸಂಬರಗಿ: ಮಹಾಮಾರಿ ಕೊರೋನಾ ಎಲ್ಲೇಡೆ ರಣಕೇಕೆ ಹಾಕಿ ಮಾನವ ಸಂಕುಲವನ್ನೇ ಸಂಕಷ್ಟಕ್ಕೆ ತಳ್ಳಿ ಜನಸಾಮಾನ್ಯರ ದಿನ ನಿತ್ಯದ ಬದುಕಿಗೆ ಸಂಚಕಾರ ತಂದೊಡ್ಡಿದೆ. ದಿನಗೂಲಿಯನ್ನೇ ನಂಬಿ ಜೀವನದ ಬಂಡಿ ಎಳೆಯುತ್ತಿರುವ ಕೂಲಿ ಕಾರ್ಮಿಕರು ಸೇರಿದಂತೆ ಬಡ ಜನರ ಬದುಕಿನಲ್ಲಿ ಕೊರೋನಾ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಜನಸಾಮಾನ್ಯರ ಹಾಗೂ ಕೂಲಿ ಕಾರ್ಮಿಕರ ಜೀವನ ಆ ದೇವರಿಗೆ ಪ್ರೀತಿ ಎಂಬಂತಾಗಿದೆ. ಅಥಣಿ ತಾಲೂಕಿನ
ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಸಂಬರಗಿ ಗ್ರಾಮದಲ್ಲಿ ಕೊರೋನಾ ಆತಂಕದ ಸಮಯದಲ್ಲಿ ದುಡಿಮೆಯೇ ಇಲ್ಲದೇ ಜನರ ಜೀವನವೇ ಸಂಕಷ್ಟಕ್ಕೆ ಸಿಲುಕಿರುವುದು ವಾಸ್ತವವಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ ಉದಾರ ಮನಸ್ಸುಗಳು ಬಡವರ ಕಷ್ಟಕ್ಕೆ ಸ್ಪಂದಿಸಿ ಮಾನವೀಯ ಸೇವೆ ಮಾಡಲು ಮುಂದಾಗಿವೆ.
ಜಮ್ಮು-ಕಾಶ್ಮೀರದ ಗಡಿಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂಬರಗಿ ಗ್ರಾಮದ ಯೋಧರಾದ ರಮೇಶ್ ಕೋಳಿ,ಬಿರದೇವ ಘಗ್ಗರೆ ಹಾಗೂ ವಿಜಯ ಕುಮಾರ ಕಂಟೇಕರ ಮೂವರು ಯೋಧರು ಕುಟುಂಬ ನಿರ್ವಹಣೆಯೊಂದಿಗೆ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಮಾನವೀಯ ನೆಲೆಗಟ್ಟಿನಲ್ಲಿ ಗ್ರಾಮದ ಬಡವರಿಗೆ ಸುಮಾರು 20,000.ರೂ ಕ್ಕೂ ಹೆಚ್ಚಿನ ದಿನಸಿ ವಸ್ತಗಳು ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದು ದರ್ಪ ದೌಲತ್ತಿನಲ್ಲಿ ಮೆರೆದು ಎಲ್ಲ ನನಗೆ ಬೇಕು, ನನ್ನಿಂದ ಬೇರೆಯವರಿಗೇನೂ ಬೇಡ ಎಂಬ ಭ್ರಮೆಯಲ್ಲಿರುವವರಿಗೆ ಮಾದರಿಯಾಗಿ ಗ್ರಾಮದ ಬಡವರ ಬದುಕಿಗೆ ಹೊದಿಕೆಯಾಗಿ ಅವರ ಕಷ್ಟ ನೀಗಿಸುವಲ್ಲಿ ಆಧಾರವಾಗಿದ್ದಾರೆ.
ಆ ಯೋಧರ ಅನುಪಸ್ಥಿತಿಯಲ್ಲಿ ಸ್ನೇಹಿತರಾದ ಉಮೇಶ ಜೀ ಕೇ ನೇತೃತ್ವದ ಸ್ನೇಹಿತರ ಬಳಗದ ಮೂಲಕ ಸಾಮಗ್ರಿಗಳು ಹಾಗೂ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು.
ದಿನಸಿ ಹಾಗೂ ಇನ್ನಿತರ ವಸ್ತುಗಳನ್ನು ಸ್ವೀಕರಿಸಿದ ನಂತರ
ಕೂಲಿ ಕೆಲಸವಿಲ್ಲದೆ ಪರದಾಡುತ್ತಿದ್ದ ಬಡ ಕಾರ್ಮಿಕರ ನಿಟ್ಟುಸಿರು ಬಿಟ್ಟು ಯೋಧರ ಮಾನವೀಯ ಕಾರ್ಯಕ್ಕೆ ಧನ್ಯತಾಭಾವ ಮೆರೆದರು.
ಗ್ರಾಮದ ವೈಧ್ಯ ಅತುಲ್ ದೇಶಪಾಂಡೆ ಮಾತನಾಡಿ ಧನ ವಂತರು ಉಳ್ಳವರು ಇಂಥಹ ಕಾರ್ಯಕ್ಕೆ ಮುಂದಾಗಿ ಎಂದು ಕರೆ ನೀಡಿದರು.
ಗ್ರಾಮದ ಪ್ರಮುಖ ಉಮೇಶ್ ಜೀ ಕೆ ಮಾತನಾಡಿ ಮಾನವ ಕುಲಕ್ಕೆ ಕೊರೋನಾ ಮಹಾಮಾರಿ ಆತಂಕವನ್ನುಂಟುಮಾಡಿದೆ ಇದರ ವಿರುದ್ದ ಹೋರಾಟ ಅನಿವಾರ್ಯವಾಗಿದೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದು,ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಿದರು.
ಇದೊಂದು ಅವಕಾಶ ಮಾನವನ ಉದಾರತೆಯ ಮಟ್ಟವನ್ನು ಪ್ರದರ್ಶಿಸಲು ಧನವಂತರು ಬಡವರ ಕಣ್ಣೀರೊರೆಸಲು ಅಣಿಯಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಬ್ದುಲ್ ಮುಲ್ಲಾ,ಲಕ್ಷ್ಮಣ ಕೋಳಿ ಸೇರಿದಂತೆ ಅನೇಕರು ಸಾಮಾಜಿಕ ಅಂತರ ಕಾಯ್ದುಕೊಂಡು ಹಾಜರಿದ್ದರು.