ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಸಮೀಪದ ಕೊಳಚಿ ಗ್ರಾಮದಲ್ಲಿ ಈ ಯಡವಟ್ಟು ನಡೆದಿದ್ದೆ.
?ವಿಡಿಯೋ ನೋಡಿ.
ಆರೋಗ್ಯವಂತ ವ್ಯಕ್ತಿಗಳಿಗೆ ಕೊರೋನಾ ಸೋಂಕು ಇದೆ ಎಂದು ವರದಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಯ ಯಡವಟ್ಟಿನ ವಿರುದ್ಧ ಕೊಳಚಿ ಗ್ರಾಮದ ಜನರು ಶುಕ್ರವಾರ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಿದರು.
ಕೊಳಚಿ ಗ್ರಾಮದಲ್ಲಿ ಗುರುವಾರ 20 ಕೊರೋನಾ ಪಾಸಿಟಿವ್ ಪತ್ತೆ ಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿತ್ತು. ಆದರೆ ಇಲಾಖೆ ನೀಡಿದ ಪಟ್ಟಿಯಲ್ಲಿ ಕೆಲವು ಆರೋಗ್ಯವಂತರ ಹೆಸರುಗಳು ಮತ್ತು ಕೊರೋನಾ ಪರೀಕ್ಷೆಗೆ ಒಳಪಡದವರ ಹೆಸರುಗಳಿದ್ದವು. ಈ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಗ್ರಾಮಸ್ಥರು ರಾಮದುರ್ಗ-ಕೊಣ್ಣೂರ
ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಆರೋಗ್ಯ ಇಲಾಖೆಗೆ ಧಿಕ್ಕಾರ ಕೂಗಿದರು.
ಆರೋಗ್ಯ ಇಲಾಖೆಯವರು ಕೊಳಚಿ ಗ್ರಾಮದಲ್ಲಿ 100 ಜನರ ಕೊರೋನಾ ಪರೀಕ್ಷೆ ಮಾಡಿದ್ದು ಅದರಲ್ಲಿ 20 ಜನರಿಗೆ ಕೊರೋನಾ ಸೊಂಕು ದೃಢಪಟ್ಟಿದೆ ಎಂದು ಗುರುವಾರ ವರದಿ ನೀಡಿತ್ತು. ಪರೀಕ್ಷೆಗೆ ಒಳಪಡದ ಇಬ್ಬರ ಹೆಸರು ಸೋಂಕಿತರ ಪಟ್ಟಿಯಲ್ಲಿ ಇದ್ದವು.
ಕೊರೋನಾ ಪರೀಕ್ಷೆ ಮಾಡದೆ ವರದಿ ನೀಡಿ ಗ್ರಾಮದ ಜನರ ಮಾನ ಹರಾಜು ಮಾಡಲಾಗಿದೆ. ಗ್ರಾಮದಲ್ಲಿ ಇಲ್ಲದವರ ಹೆಸರನ್ನು ಸೋಂಕಿತರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಬರುವವರೆಗೆ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.
ರಾಮದುರ್ಗ ಸರಕಾರಿ ಆಸ್ಪತ್ರೆಯ ಆರೋಗ್ಯ ಅಧಿಕಾರಿ ನವೀನ ನಿಜಗುಲಿ ಕೊಳಚಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಮುತ್ತಿಗೆಹಾಕಿ ತರಾಟೆಗೆ ತಗೆದುಕೊಂಡರು. ಕಂದಾಯ ಕಚೇರಿ ನಿರೀಕ್ಷಕ ಶಿವು ಗೊರವನಕೊಳ್ಳ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣ ಖಾನಾಪುರ, ಪೊಲೀಸ್ ಹವಾಲ್ದಾರ ಬಸವರಾಜ ಹಾಕಟಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜನರನ್ನು ಸಮಾಧಾನಿಸಲು ಹರಸಾಹಸಪಟ್ಟರು.
ರಾಮದುರ್ಗ ಸರಕಾರಿ ಆಸ್ಪತ್ರೆಯ ಆರೋಗ್ಯ ಅಧಿಕಾರಿ ನವೀನ ನಿಜಗುಲಿ ಕ್ಷಮೆ ಯಾಚಿಸಿ ಇಪ್ಪತ್ತು ಪ್ರಕರಣದಲ್ಲಿ ಒಂದೆರಡು ತಪ್ಪಾಗಿರಬಹುದು. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಮತ್ತೊಮ್ಮೆ ಕೊರೋನಾ ಪರೀಕ್ಷೆ ನಡೆಸುತ್ತೇವೆ. ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮಕ್ಕಾಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ ಎಂದು ಡಾ.ನವೀನ ನಿಜಗುಲಿ ಹೇಳಿದರು.
ವರದಿ: ಶ್ರೀಕಾಂತ ಪೂಜಾರ್, ರಾಮದುರ್ಗ