ಮೂಡಲಗಿ: ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅದರಲ್ಲಿ ಮಾಧ್ಯಮ ನಾಲ್ಕನೆಯ ಅಂಗ. ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿ ಇರಬೇಕು ಎಂದು ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಧೀಶೆ ಜ್ಯೋತಿ ಪಾಟೀಲ ಹೇಳಿದರು.
ಅವರು ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆವರಣದಲ್ಲಿ ಮೂಡಲಗಿ ತಾಲೂಕಾ ಪತ್ರಿಕಾ ಬಳಗ,ಮೂಡಲಗಿ ತಾಲೂಕು ಪ್ರೆಸ್ ಅಸೋಸಿಯೇಷನ್, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ, ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಹಾಗೂ ಯುವಜೀವನ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ, ಪತ್ರಕರ್ತರಿಂದ ಸಮಾಜ ತಿದ್ದುವ ಕೆಲಸವಾಗಬೇಕು. ಅವರು ವಾಸ್ತವತೆಯನ್ನು ವರದಿ ಮಾಡಬೇಕು. ಇದರಿಂದ ಸಮಾಜವನ್ನು ಎಚ್ಚರಿಸಬಹುದು ಎಂದರು.
ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಸಮಾಜದ ಕಣ್ಣುಕಿವಿಯಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಇವುಗಳಿಂದ ಎಷ್ಟೋ ಸಮಸ್ಯೆಗಳು ಬಗೆಹರಿದಿವೆ. ಸಮಾಜಕ್ಕೆ ಪತ್ರಕರ್ತರ ಕೊಡುಗೆ ಬಹಳ ದೊಡ್ಡದಿದೆ. ಭಾಷೆ, ಸಾಹಿತ್ಯ, ನಾಡಿನ ಅಭಿವೃದ್ಧಿಗೆ, ಜನಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಸಮಾಜವನ್ನು ಪ್ರಗತಿಶೀಲ ರಾಜ್ಯವನ್ನಾಗಿ ಬಿಂಬಿಸಲು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಮೌಲ್ಯಾಧಾರಿತವಾದ ವಿಚಾರಗಳಿಗೆ ಶಕ್ತಿಯನ್ನು ತುಂಬಲು ಪತ್ರಕರ್ತರು ಅದ್ಭುತ ಕೆಲಸವನ್ನು ಮಾಡುತ್ತಾರೆ ಎಂದರು.
ತಹಶೀಲ್ದಾರ್ ಡಿ.ಜಿ.ಮಹಾತ್ ಮಾತನಾಡಿ, ಪತ್ರಕರ್ತರ ವೃತ್ತಿ ರೋಚಕವಾಗಿರುತ್ತದೆ. ಪತ್ರಕರ್ತರು ತಮ್ಮ ವರದಿಗಾರಿಕೆಯನ್ನು ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ. ಈಗ ಸುದ್ದಿ ನಿರಂತರವಾಗಿ ಪ್ರಸಾರವಾಗುತ್ತಲೇ ಇರುತ್ತದೆ. ಆಧುನಿಕ ತಂತ್ರಜ್ಞಾನದಿAದ ಪತ್ರಿಕೋದ್ಯಮದಲ್ಲಿ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ನಮ್ಮಲ್ಲೇ ಮೊದಲು ಎನ್ನುವ ಸ್ಪರ್ಧೆ ಈಗ ಹೆಚ್ಚಾಗಿದೆ ಎಂದರು.
ಹಿರಿಯ ನ್ಯಾಯವಾದಿ ಕೆ.ಪಿ.ಮಗದುಮ್, ಗ್ರಂಥಪಾಲಕ ಬಿ.ಪಿ.ಬಂದಿ ಮತಾನಾಡಿದರು.
ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ವೈದ್ಯಾಧಿಕಾರಿ ಭಾರತಿ ಕೋಣಿ, ಪಿಎಸ್ಐ ಎಚ್.ವಾಯ್ ಬಾಲದಂಡಿ, ಮೂಡಲಗಿ ನ್ಯಾಯವಾದಿ ಸಂಘದ ಅಧ್ಯಕ್ಷ ಸುಧೀರ ಗೋಡಿಗೌಡರ್, ಶಿಕ್ಷಣಾ ಸಂಯೋಜಕ ಕರಿಬಸವರಾಜ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಸಾಧಕ ಪತ್ರಕರ್ತರಾದ ಮಹಾಲಿಂಗಪೂರದ ಶಿವಲಿಂಗ ಸಿದ್ನಾಳ, ಹಿರಿಯ ಪತ್ರಕರ್ತ ಬಾಲಶೇಖರ ಬಂದಿ, ಶಿರಸಿಯ ಉದಯೋನ್ಮುಖ ಪತ್ರಕರ್ತ ಸುಧೀರ ನಾಯರ್ ಅವರಿಗೆ “ಮಾಧ್ಯಮ ಶ್ರೀ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಡಲಗಿಯ ಪತ್ರಕರ್ತರು, ವಿವಿಧ ಸಂಸ್ಥೆಯ ಪದಾಧಿಕಾರಿಗಳು, ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಮೌನೇಶ ಬಡಿಗೇರ ನಿರೂಪಿಸಿದರು. ಮೂಡಲಗಿ ತಾಲೂಕು ಪ್ರೆಸ್ ಅಸೋಸಿಯೇಷನ್ ಅಧ್ಯಕ್ಷ ಎಲ್.ವಾಯ್.ಅಡಿಹುಡಿ ಸ್ವಾಗತಿಸಿದರು. ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ ವಂದಿಸಿದರು.