ಮೂಡಲಗಿ – ನಗರದ ಬಾಜಿ ಮಾರ್ಕೆಟ್ ನಲ್ಲಿ ಆಯ್ ಡಿ ಎಸ್ ಎಮ್ ಟಿ ಯೋಜನೆಯ ವ್ಯಾಪಾರಿ ಮಳಿಗೆಗಳ ಕೊನೆಯ ಮಳಿಗೆಯ ಹತ್ತಿರ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸಮಾಜ ಸೇವಕ ಮಹಾಲಿಂಗಯ್ಯ ನಂದಗಾಂವಿಮಠ ಆಗ್ರಹಿಸಿದ್ದಾರೆ.
ಜನನಿಬಿಡ ಪ್ರದೇಶದಲ್ಲಿ ಈ ಟಿ ಸಿ ಇದ್ದು ಯಾವುದೇ ಸಮಯದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಆದ್ದರಿಂದ ಕೂಡಲೇ ಟಿ ಸಿ ಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಪರ್ಯಾಸವೆಂದರೆ ಈ ಟಿ ಸಿ ಸ್ಥಳಾತರಕ್ಕೆ ೨೦೦೫ ರಲ್ಲಿಯೇ ಅರ್ಜಿ ಸಲ್ಲಿಸಿ ಒತ್ತಾಯ ಮಾಡಲಾಗಿತ್ತು. ಸ್ಥಳಾಂತರ ಮಾಡದಿದ್ದರೆ ಕೆಪಿಟಿಸಿಎಲ್ ಕಚೇರಿಯ ಎದುರು ಧರಣಿ ಮಾಡಲಾಗುವುದು ಎಂಬುದಾಗಿ ಪತ್ರಕರ್ತ ಈಶ್ವರ ಮಗದುಮ್, ಅಣ್ಣಪ್ಪ ಕೊಕಟನೂರ, ಮಹಾಲಿಂಗಯ್ಯ ನಂದಗಾಂವಿಮಠ ಮುಂತಾದವರು ಆಗಲೇ ಅರ್ಜಿ ಸಲ್ಲಿಸಿದ್ದರೂ ಇಲಾಖೆಯವರು ಕಣ್ಣು ತೆಗೆದಿಲ್ಲ. ಇದು ಇಲಾಖೆಯ ಕಾರ್ಯ ವೈಖರಿ ತೋರಿಸುತ್ತದೆ. ಅಲ್ಲದೆ ಪುರಸಭೆಯಲ್ಲಿ ಈ ಟಿಸಿ ಸ್ಥಳಾಂತರದ ಬಗ್ಗೆ ದಿ. ೨೨.೦೧.೨೦೨೧ ರಂದೇ ಠರಾವು ತೆಗೆದುಕೊಂಡು ಕೆಪಿಟಿಸಿಎಲ್ ಗೆ ನೀಡಿದ್ದರೂ ಇಲಾಖೆಯವರು ಸ್ಥಳಾಂತರ ಮಾಡುತ್ತಿಲ್ಲ. ಈಗಲಾದರೂ ಯಾವುದೇ ರೀತಿಯ ಅಪಾಯವಾಗುವ ಮುನ್ನ ಬೇಗನೆ ಟಿಸಿ ಸ್ಥಳಾಂತರ ಮಾಡಬೇಕು ಎಂದು ನಂದಗಾಂವಿಮಠ ಆಗ್ರಹಿಸಿದ್ದಾರೆ.