ಬನವಾಸಿ: ಸ್ಥಳೀಯ ಶ್ರೀ ಪಾರ್ವತಿ ಸ್ಟೋನ್ ಕ್ರಷರ್ ಮತ್ತು ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕೊರೊನಾ ಸೇನಾನಿಗಳಾದ ಪೊಲೀಸರು, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಹಾಗೂ ತಮ್ಮಲ್ಲಿ ಕೆಲಸ ಮಾಡುತ್ತಿರುವ ಬಡ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ಬುಧವಾರ ವಿತರಿಸಿದರು.
ಈ ಸಂದರ್ಭದಲ್ಲಿ ಬನವಾಸಿ ಪೊಲೀಸ್ ಠಾಣೆಯ ಪಿಎಸ್‍ಐ ಹನುಮಂತ ಬಿರಾದಾರ ಮಾತನಾಡಿ, ತಮ್ಮ ಜೀವದ ಹಂಗು ತೊರೆದು ಕೋವಿಡ್ ವಿರುದ್ದ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್‍ಗಳ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಆಹಾರ ಧಾನ್ಯ ನೀಡಿರುವ ಶ್ರೀ ಪಾರ್ವತಿ ಸ್ಟೋನ್ ಕ್ರಷರ್ ಹಾಗೂ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಿಟ್ ವಿತರಿಸಿದ ಶ್ರೀ ಪಾರ್ವತಿ ಸ್ಟೋನ್ ಕ್ರಷರ್‍ನ ಮಾಲಿಕ ಗುಣಶೇಖರ ಪಿಳ್ಳೈ ಮಾತನಾಡಿ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಸಂದರ್ಭದಲ್ಲಿ ರೋಗದ ವಿರುದ್ದ ಪೊಲೀಸರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ತಮ್ಮ ಕುಟುಂಬ ಸದಸ್ಯರಿಂದ ದೂರ ಉಳಿದು ಕೊರೊನಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ಕೊರೊನಾ ಸೇನಾನಿಗಳು ನಮ್ಮ ಪಾಲಿನ ದೇವರಾಗಿದ್ದಾರೆ ಅವರನ್ನು ನಾವೆಲ್ಲರೂ ಗೌರವದಿಂದ ಕಾಣಬೇಕು ಎಂದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಜಯಶ್ರೀ ಹೆಗಡೆ, ಕ್ರಷರ್‍ನ ಮಾಲಿಕ ಗುಣಶೇಖರ ಪಿಳ್ಳೈ, ಮಾಜಿ ಗ್ರಾಪಂ ಸದಸ್ಯೆ ಪೂರ್ಣಿಮಾ ಪಿಳ್ಳೈ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಭರತ್ ಪಿಳ್ಳೈ, ಮಧುಸೂಧನ ಪಿಳ್ಳೈ, ದರ್ಶನ್ ಪಿಳ್ಳೈ ಮತ್ತಿತರರು ಇದ್ದರು.
