ಮುಗಳಖೋಡ: ಸಮೀಪದ ಬ್ಯಾಕೂಡದಲ್ಲಿ ಕರೋನಾ ವೈರಸ ಸೊಂಕಿನಿಂದಾಗಿ ಜನರಲ್ಲಿ ಆತಂಕ ಮೂಡಿದ್ದು, ಸ್ವಲ್ಪ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ.
ಆದರೆ ಹಲವು ಖಾಸಗಿ ಆಸ್ಪತ್ರೆಗಳು ಲಾಕ್‍ಡೌನ್ ಆಗಿರುವುದರಿಂದ ಜನರು ಸರಕಾರಿ ಆಸ್ಪತ್ರೆಯ ಕಡೆ ಮುಖಮಾಡಿರುವುದು ಕಂಡುಬರುತ್ತಿದೆ. ಈ ಕಾರಣದಿಂದಾಗಿ ದಿನವು ನೂರಾರು ರೋಗಿಗಳು ಸರಕಾರಿ ಆಸ್ಪತ್ರೆಗೆ ಬರುತ್ತಿದ್ದು ರೋಗಿಗಳ ತುರ್ತು ಚಿಕಿತ್ಸೆಗಾಗಿ ಫೆವರ್ ಕ್ಲಿನಿಕ್ ತೆರೆಯಲಾಗಿದ್ದು ರೋಗಿಗಳು ಇದರ ಪ್ರಯೋಜನ ಪಡೆಯಬೇಕು, ಅಲ್ಲದೇ ಪ್ರತಿ ದಿನ ಪಿಎಚ್.ಸಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ತೆರಳಿ ರೋಗಿಗಳನ್ನು ಸ್ಥಳದಲ್ಲಿಯೇ ಪರೀಕ್ಷಿಸಿ ಉಪಚರಿಸಲಾಗುತ್ತಿದೆ ಎಂದು ವೈದ್ಯ ಮಹೇಶ ಕಂಕಣವಾಡಿ ತಿಳಿಸಿದರು.
ಸಮೀಪದ ಬ್ಯಾಕೂಡ ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತ ಹತ್ತರಿಂದ ಹದಿನೈದು ಹಳ್ಳಿಗಳಿಗೆ ಒಂದೇ ಸರಕಾರಿ ಆರೋಗ್ಯ ಕೇಂದ್ರವಾಗಿದ್ದು, ಬಡ ರೋಗಿಗಳಿಗಷ್ಟೇ ಅಲ್ಲದೆ ಈಗಿನ ಪರಿಸ್ಥಿತಿಯಲ್ಲಿ ಶ್ರೀಮಂತರಿಗೂ ಆಶಾಕಿರಣವೆಂದರೆ ತಪ್ಪಾಗಲಾರದು.
ರವಿವಾರ ಬಾಬು ಜಗಜೀವನರಾಮ ಅವರ ಜಯಂತಿ ಆಚರಣೆಯೊಂದಿಗೆ ನೆಗಡಿ, ಕೆಮ್ಮು, ಜ್ವರದಂತಹ ರೋಗಗಳಿಗೆ ಪ್ರಯೋಜನವಾಗುವ ಜ್ವರ ಪರೀಕ್ಷಾಕೇಂದ್ರವನ್ನು ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರಾದ ಮಹೇಶ ಕಂಕಣವಾಡಿ ಹಾಗೂ ರೋಗಿಗಳು ಹಾಜರಿದ್ದರು. ರೋಗಿಗಳಿಗೆ ಕೈ ತೋಳೆಯುವ ವಿಧಾನ ತಿಳಿಸಿದರು.