ಮೂಡಲಗಿ: ಸಾಧನೆ ಎನ್ನುವದು ಸಾಧಕನ ಸ್ವತ್ತಾಗಿದೆ. ಯಾವುದೇ ಕ್ಷೇತ್ರವಾಗಿರಲಿ ನಿರಂತರ ಮಾರ್ಗದರ್ಶನ ಸತತ ಪ್ರಯತ್ನ ಪಟ್ಟಾಗ ಮಾತ್ರ ಸಾಧಕರಾಗಿ ಉತ್ತುಂಗಕ್ಕೇರಬಹುದು. ಕ್ರೀಡಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿ ದಿಸೆಯಿಂದಲೆ ಕ್ರೀಡೆಗಳನ್ನು ಸವಾಲಾಗಿ ಪರಿಗಣಿಸದೆ ಉತ್ಸಾಹದಿಂದ ಭಾಗವಹಿಸುವಿಕೆ ಮೂಲಕ ದೈಹಿಕವಾಗಿ ಸದೃಢರಾಗುವ ಮೂಲಕ ಮಾನಸಿಕ ಸದೃಢತೆ ಸಾಧಿಸಬೇಕು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿಯ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಜರುಗಿದ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ರೀಡಾ ಕ್ಷೇತ್ರವು ತನ್ನದೆಯಾದ ವಿಶೇಷತೆ ಹೊಂದಿದೆ. ಕ್ರೀಡೆಗಳು ಎಲ್ಲರಿಗೂ ಅತ್ಯವಶ್ಯಕವಾಗಿವೆ. ದೈಹಿಕ, ಮಾನಸಿಕ ಸ್ಥಿರತೆ ಕಾಪಾಡಿಕೊಂಡು ಆರೋಗ್ಯಯುತ ಜೀವನ ನಡೆಸಲು ಸಹಾಯಕವಾಗುವದು. ಮೂಡಲಗಿ ಶೈಕ್ಷಣಿಕ ವಲಯವು ಎಲ್ಲ ಕ್ಷೇತ್ರಗಳಲ್ಲಿ ಸಾಧಿಸಿರುವಂತೆ ಕ್ರೀಡಾ ಕ್ಷೇತ್ರದಲ್ಲಿಯು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ತನ್ನದೆಯಾದ ಛಾಪನ್ನು ಹೊಂದಿದೆ. ಸ್ಪೇನ್ ದೇಶದ ರಫೇಲ್ ನಡಾಲ್ ಪೇರಾರ ಆಟಗಾರನು ಕ್ರೀಡಾ ಪ್ರಪಂಚಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು, ಅನುಕರಣೀಯವಾಗಿದ್ದು ಆತನ ಹಾಗೆ ತಾವುಗಳು ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದರು.
ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಮಾತನಾಡಿ, ಸಾಧನೆಗೆ ಕಠಿಣ ಪರಿಶ್ರಮದ ಅಗತ್ಯವಿದೆ. ವಲಯ ಮಟ್ಟದಲ್ಲಿ ಸಾಧನೆಗೈಯುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಯಶಸ್ವಿ ಸಾಧನೆ ಮಾಡಬೇಕು. ಸತತವಾಗಿ ಪ್ರಯತ್ನಪಟ್ಟು ನೂರಿತ ಅನುಭವಿಕರಿಂದ ತರಬೇತಿ ಪಡೆದು ಕ್ರೀಡಾ ಸಾಧನೆಯಲ್ಲಿ ಮುಂದುವರೆಯಬೇಕು. ಪ್ರತಿನಿತ್ಯ ದೈನಂದಿನ ದಿನಗಳಲ್ಲಿ ಪ್ರಯತ್ನ ಪಟ್ಟು ಆರೋಗ್ಯ ಕಾಪಾಡಿಕೊಳ್ಳುವದರ ಜೊತೆಗೆ ದೈಹಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಜಾನಪದ ಜಾಣ ಶಬ್ಬಿರ ಡಾಂಗೆ ಮಾತನಾಡಿ, ಕ್ರೀಡೆಯಲ್ಲಿ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ಪ್ರಶಸ್ತ್ಯ ನೀಡಬೇಕು. ದೊರೆತಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಪೂರೈಸಬೇಕು. ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಆಟೋಟಗಳಲ್ಲಿ ಪಾಲ್ಗೊಂಡು ಮನೊರಂಜನೆ ಪಡೆಯಬೇಕು. ದುಶ್ಚಟಗಳಿಗೆ ಇಂದಿನ ದಿನಗಳಲ್ಲಿ ಮೊಬೈಲ್ ಗೀಳಿಗೆ ಹಾಳಾಗದೆ ಹೊರಗಿನ ಪ್ರಪಂಚದ ಜೊತೆಯಾಗಿರಿ. ಖ್ಯಾತ ಕ್ರೀಡಾಪಟುಗಳಂತೆ ವಿದ್ಯಾರ್ಥಿ ಜೀವನದಲ್ಲಿಯೇ ಅವರಂತಾಗಲು ಪ್ರಯತ್ನಿಸಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಮಲ್ಲಗಂಬ ಸ್ಪರ್ಧೆಯಲ್ಲಿ ವಿಜೇತರಿಂದ ಕ್ರೀಡಾಜ್ಯೋತಿ ಬೆಳಗಿಸಿದರು. ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ವಸಿಮ್ ಅಬ್ದುಲಗಫಾರ ಡಾಂಗೆ, ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಫಲಿತಾಂಶ ನೀಡಿದ ಮಹೇಕ ಖಾಜಿ, ತೋಹಿದ ಝಾರೆ, ತಸ್ಮೀಯಾ ಬುಡ್ಡೆಬಾಯಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಸಹಶಿಕ್ಷಕ ಎ.ಎಲ್ ತಹವಿಲ್ದಾರ ಪ್ರತಿ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಶಾಲೆಗೆ ಪ್ರಥಮ ವಿದ್ಯಾರ್ಥಿಗೆ ೫೦೦೦ ನಗದು ಪ್ರಶಸ್ತಿ ಪುರಸ್ಕಾರ ನೀಡುವದಾಗಿ ಘೋಷಿಸಿದರು. ಎಮ್.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾಕೂಟಗಳು ಜರುಗಿದವು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಬ್ದುಲಗಫಾರ್ ಡಾಂಗೆ, ಮುಖಂಡರಾದ ಅಜೀಜ ಡಾಂಗೆ, ಅನ್ವರ ನದಾಫ್, ಮಲೀಕ ಹುಣಶ್ಯಾಳ, ಎಸ್.ಡಿ.ಎಮ್.ಸಿ ಅಧ್ಯಕ್ಷ ಇಮ್ತಿಯಾಜ್ ಕಲಾರಕೊಪ್ಪ, ಉಪಾಧ್ಯಕ್ಷೆ ಮದಿನಾ ಅಂಕಲಗಿ, ಮುಖ್ಯೋಪಾಧ್ಯಾಯರಾದ ಎನ್.ಕೆ ಬೋವಿ, ಎಮ್.ಎಮ್ ದಬಾಡಿ, ಎಮ್.ಇ.ಎಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಮ್.ಬಿ ಕಂಕಣವಾಡಿ, ದೈಹಿಕ ಶಿಕ್ಷಕರಾದ ಪಿ.ಜಿ ಘಂಟಿ, ಕೆ.ಎಚ್ ಪಾಟೀಲ್, ಎಲ್.ಎ ಮೇಕಲಮರಡಿ, ಆರ್ ಎಮ್ ತೆಲಸಂಗ ಇದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …