ಮೂಡಲಗಿ : ಜೂನ್ ೧೩ ರಂದು ನಡೆಯುವ ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಾಪೂರ ಮತ್ತು ಹನಮಂತ ನಿರಾಣಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಮತ್ತೊಮ್ಮೆ ಅವರಿಗೆ ಆಶೀರ್ವಾದ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಜರುಗಿದ ಅರಭಾವಿ ವಿಧಾನಸಭಾ ಮತಕ್ಷೇತ್ರದ ಘಟನಾಯಕರ ಸಭೆಯನ್ನು ನೆರವೇರಿಸಿ ಮಾತನಾಡಿದ ಅವರು, ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳಿಂದ ಅತ್ಯಧಿಕ ಮತಗಳ ಮುನ್ನಡೆ ದೊರಕಿಸಿಕೊಡುವ ಭರವಸೆ ನೀಡಿದರು.
ಶಿಕ್ಷಕರ ಮತಕ್ಷೇತ್ರದಿಂದ ಅರುಣ ಶಹಾಪೂರ ಹಾಗೂ ಪದವೀಧರ ಮತಕ್ಷೇತ್ರದಿಂದ ಹನಮಂತ ನಿರಾಣಿ ಅವರು ವಿಧಾನ ಪರಿಷತ್‌ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಈ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದರೂ ವಾಯವ್ಯ ಕ್ಷೇತ್ರಗಳು ವ್ಯಾಪಕ ವಿಸ್ತಾರ ಹೊಂದಿದೆ. ಹೀಗಾಗಿ ಮತದಾರರನ್ನು ಮುಖಾಮುಖಿಯಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ನನ್ನನ್ನೇ ನೋಡಿ ಶಹಾಪೂರ ಮತ್ತು ನಿರಾಣಿ ಅವರಿಗೆ ಮತಗಳನ್ನು ಚಲಾಯಿಸಿ ಆಯ್ಕೆ ಮಾಡಬೇಕು. ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಅವರ ಹೋರಾಟಕ್ಕೆ ನೈತಿಕ ಜಯ ಸಿಗಲಿದೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಸುಲಭ ಜಯ ಸಾಧಿಸಲು ಪ್ರತಿಯೊಬ್ಬ ಕಾರ್ಯಕರ್ತ ತಲಾ ೧೦ ಮತದಾರರನ್ನು ಭೇಟಿ ಮಾಡಿ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ವಿನಂತಿಸಿಕೊಳ್ಳಬೇಕು. ಈಗಿರುವ ಮಾಹಿತಿಯಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಶಿಕ್ಷಕರ ಮತಕ್ಷೇತ್ರದಿಂದ ೧೩೬೬ ಹಾಗೂ ಪದವೀಧರ ಮತಕ್ಷೇತ್ರದಿಂದ ೬೨೨೮ ಮತದಾರರಿದ್ದು, ಇನ್ನೂ ಸಪ್ಲಿಮೆಂಟರಿ ಮತದಾರರ ಪಟ್ಟಿ ಬರಬೇಕಿದೆ. ಒಟ್ಟಿನಲ್ಲಿ ಅವಿಭಜಿತ ಗೋಕಾಕ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಲೀಡ್ ನೀಡಿ ಆಯ್ಕೆ ಮಾಡುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭ್ಯರ್ಥಿಗಳಿಗೆ ಅಭಯ ನೀಡಿದರು.
ತುಕ್ಕಾನಟ್ಟಿ ಗ್ರಾಮದಿಂದ ತಮಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಮುನ್ನಡೆ ಬಂದಿದ್ದರಿಂದ ಈ ಚುನಾವಣೆಯಲ್ಲಿ ಪ್ರಚಾರ ಸಭೆಯನ್ನು ಇಲ್ಲಿಂದಲೇ ಆರಂಭಿಸಿದ್ದೇವೆ. ತುಕ್ಕಾನಟ್ಟಿ ಹಾಗೂ ಸುತ್ತಲಿನ ಗ್ರಾಮಗಳ ನಾಗರೀಕರು ಸದಾ ನನ್ನ ಬೆಂಬಲಕ್ಕೆ ನಿಂತಿದ್ದು, ನನ್ನ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಇಡೀ ಅರಭಾವಿ ಕ್ಷೇತ್ರದ ಮತದಾರರನ್ನು ಪಡೆದಿರುವುದು ನನ್ನ ಭಾಗ್ಯವೆಂದ ಬಾಲಚಂದ್ರ ಜಾರಕಿಹೊಳಿ ಅವರು ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ವಿಪ ಸದಸ್ಯ ಅಶ್ವತ್ಥ ನಾರಾಯಣ ಮಾತನಾಡಿ, ಹಿರಿಯರು, ಚಿಂತಕರು, ಬುದ್ದಿ ಜೀವಿಗಳು ಪ್ರತಿನಿಧಿಸುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅರುಣ ಶಹಾಪೂರ ಅವರು ಶಿಕ್ಷಣ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ೧೨ ವರ್ಷಗಳ ಕಾಲ ವಿಪ ಸದಸ್ಯರಾಗಿ ಸಾಕಷ್ಟು ಅನುಭವ ಹೊಂದಿದ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅದರಂತೆ ೬ ವರ್ಷಗಳಿಂದ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹನಮಂತ ನಿರಾಣಿ ಅವರು ಎಲ್ಲ ಪದವೀಧರರ ಹಿತರಕ್ಷಣೆಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಜೊತೆಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್ ಅಧ್ಯಕ್ಷರಾಗಿ ಇಡೀ ರೈತ ಸಮುದಾಯದ ಆಶಾ ಕಿರಣರಾಗಿ ಹೊರಹೊಮ್ಮಿದ್ದಾರೆ. ಈ ಭಾಗದ ಜನಾನುರಾಗಿ ಶಾಸಕರಾಗಿ ಮೃದು ಸ್ವಭಾವದ ಅಷ್ಟೇ ಸೌಜನ್ಯವನ್ನು ಮೈಗೂಡಿಸಿಕೊಂಡಿರುವ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಮೇಲ್ಮನೆಗೆ ಕಳುಹಿಸಿಕೊಡುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಅರಭಾವಿ ಮಂಡಲದ ಚುನಾವಣಾ ಉಸ್ತುವಾರಿ ಗುರುಪಾದ ಕಳ್ಳಿ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಅಭ್ಯರ್ಥಿ ಅರುಣ ಶಹಾಪೂರ ಸಹೋದರ ಡಾ. ಸೋಮೇಶ ಶಹಾಪೂರ, ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಈರಣ್ಣಾ ಅಂಗಡಿ, ಮಲ್ಲಿಕಾರ್ಜುನ ಮಾದನ್ನವರ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಅರಭಾವಿ ಮಂಡಲದ ಘಟನಾಯಕರು ಉಪಸ್ಥಿತರಿದ್ದರು.
ಅರಭಾವಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕುಡಚಿ ಸ್ವಾಗತಿಸಿದರು. ಗುರು ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …