ಮೂಡಲಗಿ : ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ನಮ್ಮ ದೇಶದ ಸಂವಿಧಾನವು ಪ್ರತಿ ಪ್ರಜೆಯೂ ಅನ್ಯಾಯಕ್ಕೊಳಗಾದಾಗ ಯಾವುದೇ ತಾರತಮ್ಯಕ್ಕೊಳಗಾಗದೆ ನ್ಯಾಯ ದೊರಕಿಸಿಕೊಡುವ ಸಮಾನ ಅವಕಾಶದ ಭರವಸೆಯನ್ನು ಕೊಡಮಾಡಿದೆ ಎಂದು ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಅವರು ದಿವಾನಿ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ನ್ಯಾಯಾಧೀಶರ ಅಧಿಕಾರ ಸ್ವೀಕಾರ ಸ್ವಾಗತ ಕಾರ್ಯಕ್ರಮದಲ್ಲಿ ಸತ್ಕಾರವನ್ನು ಸ್ವೀಕರಿಸಿ ಮಾತನಾಡುತ್ತಾ, ಉತ್ತರ ಕರ್ನಾಟಕದ ಜನ ನ್ಯಾಯಾಧೀಶರಿಗೆ ಗೌರವ ನೀಡುತ್ತಾರೆ, ನಾನೂ ಗ್ರಾಮೀಣ ಭಾಗದಿಂದ ಬಂದಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಕಲಿತು ನಿಮ್ಮೆಲ್ಲರ ಆಶಿರ್ವಾದದಿಂದ ನ್ಯಾಯಾಧೀಶೆಯಾಗಿದ್ದೇನೆ. ಹಿರಿಯ ವಕೀಲರ ಸಹಕಾರ ನನಗೆ ಮುಖ್ಯ. ನಾನು ನಿಮ್ಮ ಮನೆಯ ಮಗಳೆಂದು ಭಾವಿಸಿ, ಸಮಾಜದ ಎಲ್ಲ ವರ್ಗಗಳ ಜನಸಾಮಾನ್ಯರು ಯಾವುದೇ ತಾರತಮ್ಯವಿಲ್ಲದೆ ನ್ಯಾಯ ಪಡೆದುಕೊಳ್ಳುವಂತಾಗಲಿ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಕೆ.ಪಿ.ಮಗದುಮ್ ಮಾತನಾಡಿ, ಕಾನೂನು ಜ್ಞಾನವಿಲ್ಲದ ವಿದ್ಯಾವಂತರು ಸಹ ಅನೇಕ ಬಾರಿ ಶೋಷಣೆಗೊಳಗಾಗುವುದನ್ನು ನಾವು ಕಾಣುತ್ತೇವೆ ಇಂತಹ ಶೋಷಣೆಗಳು ನಿಲ್ಲಬೇಕಾದರೆ ಜನಸಾಮಾನ್ಯರು ಕಾನೂನು ಜ್ಞಾನವನ್ನು ತಿಳಿದಿರಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಗೋಡಿಗೌಡರ ಮಾತನಾಡಿ, ಕಾನೂನು ಸಾಕ್ಷರತೆಯನ್ನು ಹೆಚ್ಚಿಸುವ ಮೂಲಕ ಕಾನೂನು ನೆರವು ಒದಗಿಸುವ ಮೂಲಕ ನ್ಯಾಯ ದೊರಕಿಸಿಕೊಳ್ಳುವ ಸುಲಭ ಅವಕಾಶವನ್ನು ಒದಗಿಸಬೇಕಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಾಯ್. ಹೆಬ್ಬಾಳ, ಹಿರಿಯ ವಕೀಲರು ಚೇತನ ಲಿಂಬಿಕಾಯಿ, ವಕೀಲರ ಕಾರ್ಯ ಕುರಿತು ಮಾತನಾಡಿದರು. ಸಹಾಯಕ ಸರಕಾರಿ ಅಭಿಯೋಜಕರು ಛಾಯಾ ಬೇಡಿಕಾಳೆ, ಸಹಕಾರ್ಯದರ್ಶಿಗಳು ಎಸ್.ಬಿ.ತುಪ್ಪದ, ಪಿ.ಎಸ್.ಮಲ್ಲಾಪೂರ, ಖಜಾಂಚಿ ಎಸ್.ಎಮ್.ಗಿಡೋಜಿ, ಹಿರಿಯ ವಕೀಲರಾದ ಬಿ.ಎನ್.ಸಣ್ಣಕ್ಕಿ, ಎಸ್.ಎಲ್.ಪಾಟೀಲ ಹಾಗೂ ಹಿರಿಯ ವಕೀಲರು ಮತ್ತು ನ್ಯಾಯಲಯದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
![](https://sarvavani.com/wp-content/uploads/2022/05/23-MUDALAGI-01.jpeg)