ಕೊಪ್ಪಳ: ಶೈಕ್ಷಣಿಕ ಪ್ರಗತಿಗೆ ಸಮುದಾಯದ ಸಹಕಾರದ ಅಗತ್ಯವಿದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಂ ಹುಸೇನ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಟಾಟಾ ಕಲಿಕಾ ಟ್ರಸ್ಟ್ ನ ವತಿಯಿಂದ ಹಮ್ಮಿಕೊಂಡಿದ್ದ ಪಾಲಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಬೇಕಾದರೆ ಕೇವಲ ಇಲಾಖೆ ಹಾಗೂ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಸಮುದಾಯದ ಸಹಕಾರ ಇದ್ದಾಗ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ. ಇಲಾಖೆಯು ಶೈಕ್ಷಣಿಕ ಪ್ರಗತಿಗಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತದೆ. ಅಂತಹ ಕಾರ್ಯಕ್ರಮಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವ ಜವಬ್ದಾರಿಯು ಶಿಕ್ಷಕರು ಆಗಿದೆ. ಕೇವಲ ಇಲಾಖೆ ಹಾಗೂ ಶಿಕ್ಷಕರಿಂದ ಯಾವುದೇ ರೀತಿಯ ಯಶಸ್ವಿ ಕಾಣಲು ಸಾಧ್ಯವಿಲ್ಲ. ಇಲಾಖೆ,ಶಿಕ್ಷಕ ಹಾಗೂ ಪೋಷಕರು ಸೇರಿಕೊಂಡಾಗ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ. ಟಾಟಾ ಕಲಿಕಾ ಟ್ರಸ್ಟ್ ನಂತೆ ಅನೇಕ ಕಂಪನಿಗಳು ಕೂಡಾ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸುತ್ತಿವೆ. ಆದರೆ ಅಂತಹ ಅನೇಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕಾರ್ಯ ಮಾತ್ರ ಮಕ್ಕಳದಾಗಿದೆ,ಮಕ್ಕಳು ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಸರಕಾರದ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ಇರುತ್ತಿರಲಿಲ್ಲಾ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಅನೇಕ ರೀತಿಯ ಸೌಲಭ್ಯಗಳನ್ನು ನೀಡಿದ್ದರು ಕೂಡಾ ಮಕ್ಕಳು ಅದರ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ವಿಪುಲರಾಗಿದ್ದಾರೆ. ಪಾಲಕರು ತಮ್ಮ ಮಕ್ಕಳು ಶಿಕ್ಷಣದ ಬಗ್ಗೆ ಗಮನ ಹರಿಸಬೇಕಿದೆ. ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸುವ ಕಾರ್ಯ ಮಾತ್ರ ವಲ್ಲ. ಅವರ ಕಲಿಕೆಯ ಬಗ್ಗೆ ಹೆಚ್ಚು ಗಮನವನ್ನು ಹರಿಸಿದಾಗ ಮಾತ್ರ ಮಗು ಉತ್ತಮ ರೀತಿಯಲ್ಲಿ ಕಲಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಕಲಿಕಾ ಟ್ರಸ್ಟ್ ನ ಸಂಯೋಜಕರಾದ ಬಸವರಾಜ ಮಾತನಾಡಿದರು.
ಕಾರ್ಯಕ್ರಮವನ್ನು ಕಲಿಕಾ ಟ್ರಸ್ಟ್ ಪ್ರೇರಕಿಯಾದ ಅನಿತಾ ನಿರ್ವಹಿಸಿದರು.
ಇದೇ ಸಮಯದಲ್ಲಿ ಕಲಿಕಾ ಟ್ರಸ್ಟ್ ಬೇಸಿಗೆ ಶಿಬಿರವನ್ನು ಉದ್ಘಾಟಿಸಲಾಯಿತು.