ಮೂಡಲಗಿ: ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದಾನ ಮತ್ತು ಧರ್ಮಗಳಿಂದ ನಡೆಯುವ ‘ಸಾಹುಕಾರ್’ ಎಂದು ಈ ನಾಡಿನಲ್ಲಿ ಗುರುತಿಸಿಕೊಂಡಿರುವ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಶ್ರೀಶೈಲ್ ಮಹಾಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ಲಾಘನೆ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಮೂಡಲಗಿ ತಾಲ್ಲೂಕಿನ ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠದ ಹಣಮಂತ ದೇವರ ಮಂದಿರ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಅಶ್ವಾರೂಢ ಗುರುಬಸವರಾಜ ಅಜ್ಜನವರ ಸರ್ಕಲ್‍ದ ಉದ್ಘಾಟನಾ ಸಮಾರಂಭ ಹಾಗೂ ಧರ್ಮಸಭೆಯ ದಿವ್ಯ ಸಾನ್ನಿಧ್ಯವಹಿಸಿ ಆರ್ಶಿರ್ವಚನ ನೀಡಿದ ಅವರು, ‘ಸಾಹುಕಾರ್’ ಎಂಬ ಪದಕ್ಕೆ ನಿಜವಾದ ಅರ್ಥ ತಂದುಕೊಟ್ಟು ನುಡಿದಂತೆ ನಡೆಯುವ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಹಕಾರ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಈ ರಾಜ್ಯದಲ್ಲಿ ಕೆಲವೇ ಕೆಲವರಲ್ಲಿ ಅಪರೂಪದ ಕೊಡುಗೈ ದಾನಿ ಎಂದು ಬಣ್ಣಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ದೈವಭಕ್ತಿಯು ನಿಜಕ್ಕೂ ಶ್ಲಾಘನೀಯವಾಗಿದೆ. ಇಂಥ ಶಾಸಕರು ಅರಭಾವಿ ಕ್ಷೇತ್ರಕ್ಕೆ ದೊರತಿರುವುದರಿಂದ ಕ್ಷೇತ್ರದಲ್ಲಿ ಮಠ-ಮಾನ್ಯಗಳು ಅಭಿವೃದ್ಧಿಯಾಗುತ್ತಿದ್ದು, ಕ್ಷೇತ್ರದಲ್ಲಿ ಧರ್ಮಜಾಗೃತಿಯ ಸುಭೀಕ್ಷೆಯಾಗುತ್ತಲಿದೆ. ಬಾಲಚಂದ್ರ ಜಾರಕಿಹೊಳಿ ಅವರ ದಾನ, ಧರ್ಮ ಮತ್ತು ಸಮಾಜ ಪ್ರೀತಿಗೆ ಶ್ರೀಶೈಲ್ ಜಗದ್ಗುರು ಪೀಠವು ಹರ್ಷವ್ಯಕ್ತಪಡಿಸುತ್ತದೆ ಎಂದು ಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದರು.
ಭಾರತದ ದೈವಭಕ್ತಿಯ ನಂಬಿಕೆಯನ್ನು ಸರಿದೂಗುವಂತ ದೇಶ ಜಗತ್ತಿನಲ್ಲಿ ಬೇರೆ ಯಾವ ದೇಶವು ಇಲ್ಲ. ಭಾರತವು ಅನಂತ ಕೋಟಿ ದೇವಸ್ಥಾನಗಳು, ಮಠಮಾನ್ಯಗಳ ಸಂಗಮದಿಂದ ಧರ್ಮದ ನೆಲೆಯ ಪುಣ್ಯಭೂಮಿಯಾಗಿದೆ. ಭಾರತದಲ್ಲಿ ದಾನ, ಧರ್ಮಕ್ಕೆ ಬಡತನ ಎಂದಿಗೂ ಅಡ್ಡಿಯಾಗಿರುವುದಿಲ್ಲ. ದೇವಸ್ಥಾನ ನಿರ್ಮಾಣಕ್ಕೆ ಕಡುಬಡವ ಸಹ ದಾನಕ್ಕೆ ಮುಂದೆ ಬರುತ್ತಿದ್ದು ಇದು ಭಾರತೀಯರ ದೈವಭಕ್ತಿ ಮತ್ತು ಧರ್ಮ ಜಾಗೃತಿಯ ವೈಶಿಷ್ಟ್ಯವಾಗಿದೆ. ಭಾರತ ಮತ್ತು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿರುವ ದೇವಸ್ಥಾನಗಳನ್ನು ತುಲನೆ ಮಾಡಿದರೆ ನಮ್ಮ ದೇಶದಲ್ಲಿಯೇ ಅತ್ಯಧಿಕ ದೇವಸ್ಥಾನಗಳಿವೆ. ಆದ್ದರಿಂದಲೇ ಇದು ಧರ್ಮ ರಕ್ಷಣೆ ಹಾಗೂ ಪರಂಪರೆಯ ಸಂಕೇತವೆಂದು ಶ್ರೀಗಳು ಹೇಳಿದರು.
84 ಲಕ್ಷ ಜೀವರಾಶಿಗಳಲ್ಲಿ ಜನ್ಮವೆತ್ತುವ ಭಾಗ್ಯ ಕೇವಲ ಮನುಷ್ಯನಿಗೆ ಮಾತ್ರವಿದ್ದು, ತಾಮಸ ಗುಣಗಳನ್ನು ತ್ಯಜಿಸಿ ಸತ್ಕಾರ್ಯಗಳನ್ನು ಮಾಡುವ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ಪಂಚಭೂತಗಳು ಪಂಚಪೀಠಕ್ಕೆ ಸಂಬಂಧವಾಗಿರುವುದರಿಂದ ಶ್ರೀಶೈಲ್‍ಪೀಠಕ್ಕೆ ವಾಯು ತತ್ವದ ಪುತ್ರ ಮಾರುತಿಯಾಗಿರುವುದರಿಂದ ನನ್ನ ತಂದೆ ವಾಯುವಿನ ಅಣತಿಯಂತೆ ಮುನ್ಯಾಳದ ಮಾರುತಿ ದೇವಸ್ಥಾನವನ್ನು ಉದ್ಘಾಟಿಸುವಂತೆ ಮಾಡಿರುವುದು ಮತ್ತು ಶ್ರೀಶೈಲ್‍ದ ಸೂರ್ಯಸಿಂಹಾಸನವು ಸಹ ಮಾರುತಿಯ ಗುರುಸ್ಥಾನದಲ್ಲಿರುವುದರಿಂದ ಇದು ಎಲ್ಲವೂ ಯೋಗಾಯೋಗವಾಗಿದೆ ಎಂದರು.
ಶ್ರೀಶೈಲ್ ಪೀಠಾರೋಹಣದ 12 ವರ್ಷಗಳು ಪೂರ್ಣಗೊಂಡಿರುವ ನಿಮಿತ್ಯ ಬರುವ ವರ್ಷದಿಂದ ಯಡೂರದಿಂದ ಶ್ರೀಶೈಲ್‍ದವರೆಗೆ 600 – 700 ಕಿ.ಮೀ ವರೆಗೆ ಧರ್ಮ ಜಾಗೃತಿಯ ಪಾದಯಾತ್ರೆ ಮಾಡುವ ಸಂಕಲ್ಪ ಮಾಡಲಾಗಿದೆ. ಪಾದಯಾತ್ರೆಯ ಮಾರ್ಗದ ಎರಡೂ ಬದಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಮಾಡಲಾಗುವುದು. ಪಾದಯಾತ್ರೆಯಲ್ಲಿ ಭಕ್ತರು ತನು-ಮನದಿಂದ ಭಾಗವಹಿಸಿ ಪುನೀತರಾಗುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹಾಗೂ ಕೆ.ಎಂ.ಎಫ್. ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ‘ಭಾರತ ದೇಶವು ಪುಣ್ಯಪುರುಷರ ನಾಡಾಗಿದ್ದು, ಇಂತಹ ನಾಡಿನಲ್ಲಿ ನೆಲೆಸಿರುವ ನಾವೆಲ್ಲರೂ ಪುಣ್ಯವಂತರಾಗಿದ್ದೇವೆ’ ಎಂದು ಹೇಳಿದರು.
ದೈವಭಕ್ತರಾಗಿರುವ ಭಾರತೀಯರಿಗೆ ದೇವರ ಮೇಲಿರುವ ನಂಬಿಕೆ ಅಪಾರವಾಗಿದೆ. ಅಂತಹ ನಂಬಿಕೆಯಿಂದಾಗಿ ಕೊರೋನಾದಂತ ಮಹಾಮಾರಿಯನ್ನು ಸಹ ಎದುರಿಸಲು ಸಾಧ್ಯವಾಯಿತು. ಜಗದ್ಗುರುಗಳಂತಹ ಪುಣ್ಯಪುರುಷರ ಸತ್ಸಂಗದಿಂದಾಗಿ ನಾಡು ಪಾವಿತ್ರ್ಯತೆಯನ್ನು ಹೊಂದಿದೆ. ಶ್ರೀಶೈಲ ಜಗದ್ಗುರುಗಳನ್ನು ಹುಬ್ಬಳ್ಳಿಯಿಂದ ಹೈದ್ರಾಬಾದಗೆ ತೆರಳುವ ವಿಮಾನದಲ್ಲಿ ಭೇಟಿಯಾಗಿದ್ದೆ. ಅವರನ್ನು ಮತ್ತೊಮ್ಮೆ ಭೇಟಿ ಮಾಡುವ ಅವಕಾಶ ಈ ಮೂಲಕ ಮುನ್ಯಾಳದಲ್ಲಿ ದೊರೆತಿರುವುದು ನನ್ನ ಭಾಗ್ಯ ಎಂದು ಹೇಳಿದರು.
ಮುನ್ಯಾಳದ ಸದಾಶಿವಯೋಗೀಶ್ವರ ಮಠದ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ 25 ಲಕ್ಷ ರೂ.ಗಳನ್ನು ಸರ್ಕಾರದಿಂದ ನೀಡಿದ್ದು, ಇನ್ನುಳಿದ 75 ಲಕ್ಷ ರೂ.ಗಳನ್ನು ಸೇರಿಸಿ ಒಟ್ಟು 1 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲು ಪೂರ್ಣ ಸಹಕಾರ ನೀಡುತ್ತೇನೆ. ಜಗದ್ಗುರುಗಳ ಆಶಯದಂತೆ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರಗಳಲ್ಲಿರುವ ಎಲ್ಲ ಮಠ-ಮಾನ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.
ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರಮಠದ ಪೀಠಾಧಿಪತಿ ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿ ಶ್ರೀಮಠದ ಪ್ರಗತಿಗೆ ಸದ್ಭಕ್ತರು ನೀಡುತ್ತಿರುವ ಪ್ರೋತ್ಸಾಹವನ್ನು ಸ್ಮರಿಸಿದರು.
ಗೋಕಾಕದ ಶೂನ್ಯಸಂಪಾದನಾಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹುಕ್ಕೇರಿ-ಬೆಳಗಾವಿಯ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಮಹಾಸ್ವಾಮಿಗಳು, ಬಬಲಾದಿ ಹಿರೇಮಠದ ಓಂಕಾರೇಶ್ವರ ಮಹಾಸ್ವಾಮಿಗಳು, ಅರಕೇರಿಯ ಅವದೂತ ಸಿದ್ದಮಹಾರಾಜರು ಈ ಸಂದರ್ಭದಲ್ಲಿ ಧರ್ಮ ಜಾಗೃತಿ ಕುರಿತು ಮಾತನಾಡಿದರು.
ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಇಟನಾಳದ ಸಿದ್ದೇಶ್ವರ ಶರಣರು, ಮುನ್ಯಾಳದ ಲಕ್ಷ್ಮಣ ದೇವರು, ಬಸವರಾಜ ಹಿರೇಮಠ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತನು-ಮನ-ಧನ ಸಹಾಯ ಮಾಡಿರುವ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೃದಯಸ್ಪರ್ಶಿಯಾಗಿ ಸತ್ಕರಿಸಿ ನೆನಪಿನ ಕಾಣಿಕೆ ನೀಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಅಶ್ವಾರೂಢ ಗುರುಬಸವರಾಜ ಅಜ್ಜನವರ ಸರ್ಕಲ್ ಉದ್ಘಾಟನೆಯನ್ನು ನೆರವೇರಿಸಲಾಯಿತು. ಸರ್ಕಲ್‍ದಿಂದ ಜಗದ್ಗುರುಗಳು, ಶ್ರೀಗಳನ್ನು ಹಾಗೂ ಗಣ್ಯಮಾನ್ಯರನ್ನು ಪೂರ್ಣಕುಂಭ, ಆರತಿ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು.
ಮಲ್ಲಿಕಾರ್ಜುನ ಕಬ್ಬೂರ, ಆನಂದರಾವ ನಾಯ್ಕ, ಸಂಗಪ್ಪ ಸೂರಣ್ಣವರ, ಸುಭಾಷ ಢವಳೇಶ್ವರ, ಸಂತೋಷ ಸೋನವಾಲಕರ, ಹನಮಂತ ತೇರದಾಳ, ಮಹಾದೇವ ಗೋಡಿಗೌಡರ, ಬಾಳಾಸಾಹೇಬ ನಾಯ್ಕ, ಮಲ್ಲಯ್ಯಾ ಹಿರೇಮಠ, ಗೋವಿಂದಪ್ಪ ವಂಟಗೋಡಿ, ದುಂಡಪ್ಪ ಪಾಟೀಲ, ಕಲ್ಲಪ್ಪ ಮನಗೂಳಿ, ನಿಜಪ್ಪ ಜಿನಗನ್ನವರ, ಮಹಾಂತೇಶ ಬೈಲವಾಡ, ಮಹೇಶ ಬಾಗೋಜಿ, ರವಿ ಜನಮಟ್ಟಿ, ಶ್ರೀಮಂತ ಹುಚರಡ್ಡಿ, ಲಕ್ಕಪ್ಪ ಹುಚರಡ್ಡಿ, ವಿಠ್ಠಲ ಸಂಕನ್ನವರ, ರವಿ ಪಾಟೀಲ, ಮುನ್ಯಾಳ-ರಂಗಾಪೂರ ಗ್ರಾಮಗಳ ಸುತ್ತಮುತ್ತಲಿನ ಸದ್ಬಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Check Also
ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ
Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …