ಮೂಡಲಗಿ: ಕರೋನಾದ ಎರಡನೇ ಅಲೆಯ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದು ಅವುಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರೆ ನೀಡಿದರು.
ಶನಿವಾರ (ಮೇ.1)ರಂದು ಮೂಡಲಗಿ ನಗರದ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಕೇರ ಸೆಂಟರ್‍ಗೆ ಭೇಟಿ ನೀಡಿ, ತಾಲೂಕಾ ಅಧಿಕಾರಿಗಳ ಜೊತೆಗೆ ಕೊರೊನಾ ಸ್ಥಿತಿಗತಿ ಹಾಗೂ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಸಭೆ ನಡೆಸಿ ಮಾತನಾಡಿದ ಈರಣ್ಣ ಕಡಾಡಿ ಅವರು ಸೋಂಕು ಹೆಚ್ಜಿರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಬೇಕು, ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸುರಕ್ಷತೆ ಕ್ರಮ, ಸೋಂಕಿತರಿಗೆ ವಿಳಂಬವಾಗದೆ ಬೇಕಾದಂತಹ ಅಗತ್ಯವಾದ ತುರ್ತು ಚಿಕಿತ್ಸೆ ಕುರಿತು ಸೂಚಿಸಲಾಯಿತು.
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್ ಬೆಡ್ ಲಭ್ಯತೆಯನ್ನು ಹೆಚ್ಚಿಸಲು ಹಾಗು ಆಂಬ್ಯುಲೆನ್ಸ್ ಸೇವೆ ಕೊರತೆಯಾಗದಂತೆ ಕೂಡ ಗಮನಹರಿಸಲು ತಾಲೂಕಾಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಸರ್ಕಾರವು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿ ರೂ. 26,000 ಕೋಟಿ ರೂ. ವೆಚ್ಚದಲ್ಲಿ ಮೇ ಮತ್ತು ಜೂನ್ ತಿಂಗಳಿನಲ್ಲಿ ದೇಶದ 80 ಕೋಟಿ ಫಲಾನುಭವಿಗಳಿಗೆ ಉಚಿತವಾಗಿ 5 ಕೆ. ಜಿ. ಪಡಿತರ ವಿತರಿಸಲಿದೆ. ಮೂರು ತಿಂಗಳ ಅವಧಿಗೆ ಕೋವಿಡ್ ಲಸಿಕೆ ಆಮದು ಮೇಲಿನ ಸುಂಕವನ್ನು ಮನ್ನಾ ಮಾಡಲಾಗಿದೆ ಎಂದರು.
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಜಾರಿಗೊಳಿಸಲಾಗಿದ್ದ ವಿಮಾ ಯೋಜನೆಯನ್ನು ಮುಂದಿನ 1 ವರ್ಷಗಳವರೆಗೆ ವಿಸ್ತರಿಸಿದೆ ಎಂದ ಅವರು ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ದೇಶದಾದ್ಯಂತದ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಪಿಎಸ್‍ಎ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.
ಭಾರತೀಯ ರೈಲ್ವೆ ಇಲಾಖೆಯಿಂದ ದೇಶದಲ್ಲಿ ಸುಮಾರು 64,000 ಹಾಸಿಗೆಗಳುಳ್ಳ 4,000 ಕೋವಿಡ್ ಕೇರ್ ಬೋಗಿಗಳು ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಂಪೂರ್ಣ ಸಜ್ಜಾಗಿದೆ. ವೈದ್ಯಕೀಯ ಆಮ್ಲಜನಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಕ್ಷಿಪ್ರವಾಗಿ ರೋಗಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿಶೇಷ ಆಕ್ಸಿಜೆನ್ ಎಕ್ಸಪ್ರೆಸ್ ರೈಲುಗಳ ವೇಗದ ಸಂಚಾರಕ್ಕೆ ಅನುವು ಮಾಡಿಕೊಡಲು ಗ್ರೀನ್ ಕಾರಿಡಾರ ರಚನೆ ಮಾಡಲಾಗಿದೆ.
ಕೇಂದ್ರ ಸರ್ಕಾರವು ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ 15 ಕೋಟಿಗೂ ಅಧಿಕ ಲಸಿಕೆ ಒದಗಿಸಿದೆ. ಒಗ್ಗಟ್ಟಾಗಿ ಕೊರೋನಾ ವಿರುದ್ಧ ಹೋರಾಡಿ ಭಾರತವನ್ನು ಕೊರೊನಾ ಮುಕ್ತವಾಗಿಸಲು ನಾವೆಲ್ಲರೂ ಪಣ ತೊಡೋಣ ಎಂದರು.
ಗೋಕಾಕ ಡಿ.ವಾಯ.ಎಸ್.ಪಿ ಜಾವೇದ ಇನಾಂದಾರ, ಮೂಡಲಗಿ ತಹಶೀಲ್ದಾರ್ ಮೋಹನ ಭಸ್ಮೆ, ಗೋಕಾಕ ತಹಶೀಲ್ದಾರ್ ನವೀನ ಹುಳ್ಳೂರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಡಾ. ಭಾರತಿ ಕೊಣಿ, ಪ್ರಕಾಶ ಮಾದರ, ಈಶ್ವರ ಮುರಗೋಡ, ಮಲ್ಲಪ್ಪ ನ್ಯಾಮಗೌಡರ, ಮಹಾಲಿಂಗ ವಂಟಗೂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.