ಕೊಪ್ಪಳ: ಸೇವಾ ಮನೋಭಾನೆಯಿಂದ ಶ್ರಮಿಸುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತ್ಯಾಗದ ಮತ್ತೊಂದು ಶಬ್ದವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಕೊಪ್ಪಳ ಸಂಸ್ಥೆಯ ಸಹಯೋಗದಲ್ಲಿ ಭಾಗ್ಯನಗರದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ “ಜಿಲ್ಲಾ ಮಟ್ಟದ ಸಮಾವೇಶ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದ ಜೊತೆಗೆ ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವನೆ ನೀಡಿದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗುತ್ತಾರೆ. ಈ ನಿಟ್ಟಿನಲ್ಲಿ ಇಂಥ ಶಿಸ್ತಿನ ಶಿಕ್ಷಣ ನೀಡಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಶ್ರಮಿಸುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಸ್ಥಾಪಿಸಬೇಕು ಎಂದು ಬೇಡಿಕೆ ಇತ್ತು. ಎಲ್ಲರ ಶ್ರಮದ ಪ್ರತಿಫಲವಾಗಿ ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಪ್ರಾರಂಭವಾಗಿದೆ. ಕೊಪ್ಪಳ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗದೆ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಎಲ್ಲ ಜಿಲ್ಲೆಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಈ ತರಬೇತಿ ಕೇಂದ್ರವನ್ನು ಅಭಿವೃದ್ಧಿ ಪಡಿಸಬೇಕು ಎಂದರು.
ಯಾವುದೇ ಒಂದು ಸಂಘಟನೆಯಲ್ಲಿ ಟೀಮ್‌ವರ್ಕ್ ಇಲ್ಲ ಅಂದರೆ ಅದು ಸಫಲವಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಯುನಿಟ್‌ನಲ್ಲಿ ನಡೆಯುತ್ತದೆ. ಸಂಸ್ಥೆಯ ಯುನಿಟ್ ಲೀರ‍್ಸ್ಗಳು ಈಗಾಗಲೇ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಡೆದಂತಹ ತರಬೇತಿ ರಿಫ್ರೇಶ್ ಆಗುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಶಿಬಿರ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಲಿವೆ. ಡಿಡಿಪಿಐ ಎಂ.ಎ ರೆಡ್ಡೇರ್ ರವರು ಗದಗನಲ್ಲಿ ಬಿಇಓ ಆಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಸಲಹೆ ನೀಡಿದ್ದರು. ಅದರ ಪ್ರತಿಫಲವಾಗಿ ಅಂದಿನ ಪ್ರವಾಸೋದ್ಯಮ ಸಚಿವರಿಗೆ ನಮ್ಮ ಸಂಸ್ಥೆಯವರಿಂದ ಪತ್ರ ಬರೆದಿದ್ದು, ಪ್ರಯತ್ನ ಯಶಸ್ವಿಯಾಗಿ ಅಂದು ಐದು ಸಾವಿರ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಂದ ಈ ಕಾರ್ಯಕ್ರಮ ಪ್ರಸ್ತುತ 10 ಸಾವಿರ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಮಾಡಿಸುತ್ತಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ ರಡ್ಡೇರ್ ಅವರು ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಹುಡುಕಬಲ್ಲ ಸಂಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಆಗಿದೆ. ಈ ಸಂಸ್ಥೆಗೆ ಶಾಲೆಗಳಲ್ಲಿ ಸ್ವಯಂ ಸರ್ಕಾರಗಳೆಂದು ಕರೆಯುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದೆ. ಸ್ಕೌಟ್ಸ್ & ಗೈಡ್ಸ್ನಲ್ಲಿರುವ ಮಕ್ಕಳಿಗೆ ಸರ್ಕಾರದಿಂದ ಮೀಸಲಾತಿ ಸೌಲಭ್ಯವಿದ್ದು, ಇದರ ಬಗ್ಗೆ ಅರಿವು ಮೂಡಿಸಬೇಕು. ಎಲ್ಲ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಜಿಲ್ಲೆಯ ಕೆಲ ಗ್ರಾಮೀಣ ಭಾಗಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಇದ್ದಾರೆ. ಅವರನ್ನು ಮರಳಿ ಶಾಲೆಗೆ ಕರೆತರುವಂತಹ ಕಾರ್ಯವಾಗಬೇಕು. ಈ ಪ್ರಯತ್ನಕ್ಕೆ ಸ್ಕೌಟ್ಸ್ & ಗೈಡ್ಸ್ ಸಂಸ್ಥೆಯವರು ಸಹಕರಿಸಿ, ಶಾಲೆ ಬಿಟ್ಟ ಮಕ್ಕಳಿಗೆ ಶಾಲೆಗೆ ಕರೆತರಲು ಶ್ರಮಿಸಬೇಕು ಎಂದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮಾತಾಡಿ,ಮಕ್ಕಳಿಗೆ ಶಿಸ್ತನ್ನು ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು.ಶಿಸ್ತು ಇದ್ದಾಗ ಮಾತ್ರ ಮಕ್ಕಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ತಮ್ಮ ಇಳಿಯ ವಯಸ್ಸಿನಲ್ಲಿ ಕೂಡಾ ರಾಜ್ಯ ಪ್ರಧಾನ ಆಯುಕ್ತರು ಸಾದಾ ಚಟುವಟಿಕೆಗಳ ಮೂಲಕ ರಾಜ್ಯದ ತುಂಗಾ ಪ್ರವಾಸ ಮಾಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಬಲಡಿಸುತ್ತಿದ್ದಾರೆ.ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬುವ ಕಾರ್ಯ ನಮ್ಮಿಂದ ಆಗಬೇಕಿದೆ ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳದ ಜಿಲ್ಲಾ ಮುಖ್ಯ ಆಯುಕ್ತರಾದ ಎಚ್.ಎಂ.ಸಿದ್ಧರಾಮಸ್ವಾಮಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಸಂಸ್ಥೆಯ ರಾಜ್ಯ ಸಂ. ಆಯುಕ್ತರಾದ ಮಲ್ಲೇಶ್ವರಿ ಜುಜಾರೇ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಸಂಸ್ಥೆಯ ಜಿಲ್ಲಾ ಆಯುಕ್ತರಾದ ಮಲ್ಲಿಕಾರ್ಜುನ ಚೌಕಿಮಠ, ಜಿಲ್ಲಾ ಗೈಡ್ಸ್ ಆಯುಕ್ತರಾದ ಅರುಣಾ ವಸ್ತ್ರದ,ಜಯರಾಜ್, ಪ್ರಭು ಕಿಡದಾಳ, ಸಂಗನಗೌಡರ್ ಸೇರಿದಂತೆ ವಿವಿಧ ತಾಲ್ಲೂಕು ಘಟಕದ ಕಾರ್ಯದರ್ಶಿಗಳು, ಪ್ರತಿನಿಧಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ;
ಪ್ರಸಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು.
