ಗೋಕಾಕ: ಡಾ: ಬಾಬು ಜಗಜೀವನರಾಮ ಅಭಿವೃದ್ಧಿ ನಿಗಮದಿಂದ ಅರಭಾವಿ ಪಟ್ಟಣದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ವಸತಿ ನಿರ್ಮಾಣಕ್ಕಾಗಿ 90 ಲಕ್ಷ ಅನುದಾನ ಬಿಡುಗಡೆಯಾಗಿದೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿಗೃಹದಲ್ಲಿ ಫಲಾನುಭವಿಗಳಿಗೆ ವಸತಿ ಸೌಲಭ್ಯಗಳ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಡಾ: ಬಾಬು ಜಗಜೀವನರಾಮ ಅಭಿವೃದ್ಧಿ ನಿಗಮದಿಂದ 18 ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿವೆ. ತಲಾ 5 ಲಕ್ಷ ರೂಪಾಯಿಗಳು ಪ್ರತಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಈ ಮನೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರಿ ವಿವೇಚನ ಕೋಟಾದಡಿ ಉದ್ಯೋಗಿನಿ ಯೋಜನೆಯಡಿ ಎಸ್.ಸಿ ಸಮಾಜದ 20 ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಆದೇಶ ಪತ್ರಗಳನ್ನು ವಿತರಿಸಿದರು. ಒಟ್ಟು 60 ಲಕ್ಷ ರೂಪಾಯಿಗಳ ಸಾಲ ಸೌಲಭ್ಯಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 30 ಲಕ್ಷ ರೂಗಳು ಫಲಾನುಭವಿಗಳಿಗೆ ಸಬ್ಸಿಡಿ ನೆರವು ದೊರೆಯಲಿದೆ. ತಲಾ 3 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಇದ್ದು, ಇದರಲ್ಲಿ ತಲಾ 1.50 ಲಕ್ಷ ರೂಪಾಯಿಗಳು ಫಲಾನುಭವಿಗಳಿಗೆ ಸಬ್ಸಿಡಿ ಸಿಗಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಡಾ: ಬಾಬು ಜಗಜೀವನರಾಮ ಅಭಿವೃದ್ಧಿ ನಿಗಮದ ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ಬವಿಶ್ಯಾ ಮಾರ್ಟಿನ್, ಜಿಲ್ಲಾ ಸಂಯೋಜಕ ಡಾ: ನಾಗರಾಜ, ದಲಿತ ಸಮಾಜದ ಮುಖಂಡರಾದ ರಮೇಶ ಮಾದರ, ಲಕ್ಷ್ಮಣ ತೆಳಗಡೆ, ಸತ್ತೇಪ್ಪ ಕರವಾಡೆ, ಶಾಂತಪ್ಪ ಹಿರೇಮೇತ್ರಿ, ಸಂಜು ಮಾದರ, ಯಮನಪ್ಪ ಕರಬನ್ನವರ, ಮನೋಹರ ಅಜ್ಜನಕಟ್ಟಿ, ವಿರೂಪಾಕ್ಷ ಬೈಲನ್ನವರ, ಚಂದ್ರಕಾಂತ ದೊಡಮನಿ, ಬಸು ಕಾಡಾಪೂರ, ಬಸವರಾಜ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು : ಬಾಲಚಂದ್ರ ಹರ್ಷ
ಆರ್.ಆರ್.ನಗರ ಮತ್ತು ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದಕ್ಕೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳೇ ಈ ಗೆಲುವಿಗೆ ಕಾರಣವಾಗಿವೆ. ಅದಕ್ಕಾಗಿ ಗೆಲುವಿನ ನಗೆ ಬೀರಿರುವ ಮುನಿರತ್ನ ಹಾಗೂ ಡಾ: ರಾಜೇಶಗೌಡ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
.