ಭಾನುವಾರ , ಡಿಸೆಂಬರ್ 22 2024
kn
Breaking News

ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಬಣ ಸಂಪೂರ್ಣವಾಗಿ ವಿಜಯದತ್ತ ದಾಪುಗಾಲು ಹಾಕುತ್ತಿದೆ.
ಮೊದಲ ಸುತ್ತಿನ ಪಂಚಾಯತಗಳ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಮೆಳವಂಕಿ, ಕೌಜಲಗಿ, ಗೋಸಬಾಳ, ಬೆಟಗೇರಿ, ಉದಗಟ್ಟಿ, ಧರ್ಮಟ್ಟಿ, ಗುಜನಟ್ಟಿ, ಪಟಗುಂದಿ, ಶಿವಾಪೂರ(ಹ), ಖಾನಟ್ಟಿ, ಹುಣಶ್ಯಾಳ ಪಿವಾಯ್, ತಿಗಡಿ, ಮಸಗುಪ್ಪಿ, ಕಾಮನಕಟ್ಟಿ ಗ್ರಾಮ ಪಂಚಾಯತಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಸಂಪೂರ್ಣ ಬಹುಮತ ಸಾಧಿಸಿದ್ದಾರೆ.
ಈಗ ಎರಡನೇ ಸುತ್ತಿನ ಪಂಚಾಯತಗಳ ಮತಗಳ ಎಣಿಕೆ ನಡೆಯುತ್ತಿದ್ದು, ಅದರಲ್ಲಿ ಬಡಿಗವಾಡ, ಕಳ್ಳಿಗುದ್ದಿ, ದುರದುಂಡಿ, ವಡೇರಹಟ್ಟಿ, ತುಕ್ಕಾನಟ್ಟಿ, ಕುಲಗೋಡ, ಹುಣಶ್ಯಾಳ ಪಿಜಿ, ಢವಳೇಶ್ವರ, ಯಾದವಾಡ ಮತ್ತು ಹಳ್ಳೂರ ಗ್ರಾಮ ಪಂಚಾಯತಗಳಲ್ಲಿಯೂ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.
ಅರಭಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 33 ಗ್ರಾಮ ಪಂಚಾಯತಿಗಳ ಚುನಾವಣೆ ನಡೆದಿದ್ದು, ಅದರಲ್ಲಿ ಒಟ್ಟು 584 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂಪೂರ್ಣ ಹಿಡಿತ ಸಾಧಿಸಿದ್ದು, ಕಾಂಗ್ರೇಸ್-ಜೆಡಿಎಸ್ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಇದರಿಂದ ಆ ಪಕ್ಷಗಳ ಮುಖಂಡರುಗಳಿಗೆ ಭಾರೀ ಮುಖಭಂಗವಾದಂತಾಗಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹೊಸ ಸದಸ್ಯರುಗಳು ಸ್ಥಳೀಯ ಎನ್‍ಎಸ್‍ಎಫ್ ಅತಿಥಿ ಗೃಹಕ್ಕೆ ಆಗಮಿಸಿ ವಿಜಯೋತ್ಸವ ಆಚರಿಸಿದರು.
ಶಾಸಕರ ಪರವಾಗಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಲಕ್ಕಪ್ಪ ಲೋಕುರಿ, ದಾಸಪ್ಪ ನಾಯಿಕ, ನಿಂಗಪ್ಪ ಕುರಬೇಟ ಅವರನ್ನು ಗ್ರಾಮ ಪಂಚಾಯತಿಗಳ ನೂತನ ಸದಸ್ಯರುಗಳು ಹಾಗೂ ಮುಖಂಡರುಗಳು ಹೂ-ಹಾರ ಹಾಕಿ ಅಭಿನಂದಿಸಿದರು.
ಇನ್ನು ಮೂರನೇ ಸುತ್ತಿನಲ್ಲಿ ನಲ್ಲಾನಟ್ಟಿ, ಬಳೋಬಾಳ, ಲೋಳಸೂರ, ತಪಸಿ, ದಂಡಾಪೂರ, ಸುಣಧೋಳಿ, ಅವರಾದಿ, ಮುನ್ಯಾಳ ಮತ್ತು ರಾಜಾಪೂರ ಗ್ರಾಮ ಪಂಚಾಯತಗಳ ಮತ ಎಣಿಕೆಯು ಬಾಕಿ ಇವೆ.

: ಕ್ಷೇತ್ರದ ಮತದಾರರನ್ನು ಅಭಿನಂದಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ :
ಗ್ರಾಮ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಎಲ್ಲ ಮತದಾರರನ್ನು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದ್ದಾರೆ.
ಅರಭಾವಿ ಮತಕ್ಷೇತ್ರದಲ್ಲಿ ಒಟ್ಟು 34 ಗ್ರಾಮ ಪಂಚಾಯತಗಳಿದ್ದು, ಅದರಲ್ಲಿ ತಳಕಟ್ನಾಳ ಹೊರತುಪಡಿಸಿ 33 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿದೆ. ಎಲ್ಲ ಪಂಚಾಯತಿಗಳಲ್ಲಿಯೂ ನಮ್ಮ ಬೆಂಬಲಿತ ಅಭ್ಯರ್ಥಿಗಳೇ ಭರ್ಜರಿ ಗೆಲುವಿನತ್ತ ಸಾಗುತ್ತಿದ್ದಾರೆ. ಈಗಾಗಲೇ ಎರಡನೇ ಸುತ್ತಿನ ಗ್ರಾಮ ಪಂಚಾಯತಿಗಳ ಮತ ಎಣಿಕೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದಾರೆ. ಮೂರನೇ ಸುತ್ತಿನ ಗ್ರಾಮ ಪಂಚಾಯತಗಳ ಮತ ಎಣಿಕೆ ಕಾರ್ಯ ತಡ ರಾತ್ರಿವರೆಗೂ ಫಲಿತಾಂಶ ಪ್ರಕಟಗೊಳ್ಳಲಿದೆ. ಎಲ್ಲ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಶೇ 97 ರಷ್ಟು ನಮ್ಮವರೇ ಜಯಗಳಿಸಲಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಹೋಗಬೇಕು. ಪ್ರತಿ ಪಂಚಾಯತಿಗಳಲ್ಲಿ ನಮ್ಮ ಬೆಂಬಲಿಗರಲ್ಲಿಯೇ ಎರಡೆರಡು ಬಣಗಳು ಸೃಷ್ಟಿ ಆಗಿದ್ದರಿಂದ ಚುನಾವಣೆಯಲ್ಲಿ ಗೆದ್ದವರಿಗೆ ಖುಷಿ ಹಾಗೂ ಸೋತವರಿಗೆ ನಿರಾಶೆಯಾಗಿದೆ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ. ಅಭಿವೃದ್ಧಿ ಕಾರ್ಯಗಳತ್ತ ಮುನ್ನಡೆಯಿರಿ. ಗ್ರಾಮ ವಿಕಾಸಕ್ಕಾಗಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಶ್ರಮಿಸಿ ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ನೂತನ ಸದಸ್ಯರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page