ಚಿಕ್ಕೋಡಿ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕೆಲವು ಅನುದಾನಿತ ಪ್ರೌಢ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಮಧ್ಯೆ ಒಳ್ಳೆಯ ವಾತಾವರಣವಿಲ್ಲ. ಶಿಕ್ಷಕರ ಮೇಲೆ ಮುಖ್ಯೋಪಾಧ್ಯಾಯರ ಹಿಡಿತವಿಲ್ಲದಂತಾಗಿದೆ. ಹೀಗಾಗಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಇಲ್ಲಿನ ಸಿ.ಬಿ.ಕೋರೆ ಸಭಾಭವನದಲ್ಲಿ ಬುಧುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ಸಿದ್ದತೆಯ ಜಿಲ್ಲಾ ಮಟ್ಟದ ಮುಖ್ಯೋಪಾಧ್ಯಾಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕರು ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇಂದಿನ ದಿನಮಾನಕ್ಕೆ ತಕ್ಕಂತೆ ಬದಲಾವಣೆಯಾಗಲು ಸಾಧ್ಯವಾಗದಿದ್ದರೇ ಮುಖ್ಯೋಪಾಧ್ಯಾಯರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಬ್ಬರು ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದು ಕೆಲವು ಮುಖ್ಯಶಿಕ್ಷಕರ ಕಾರ್ಯವೈಖರಿ ಕಂಡು ವಿಷಾದ ವ್ಯಕ್ತ ಪಡಿಸಿದರು. ಭವಿಷ್ಯದ ಒಳ್ಳೆಯ ನಾಗರಿಕರನ್ನು ರೂಪಿಸುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು. ಆ ನಿಟ್ಟಿನಲ್ಲಿ ಕೇವಲ ಪರೀಕ್ಷೆಯಲ್ಲಿ ಪಾಸು ಮಾಡುವುದು ಆಗಬಾರದು. ಅವರಲ್ಲಿ ಪಾಠದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ಬಿಇಓ, ಬಿಆರ್‍ಸಿ, ವಿಷಯ ಪರಿವೀಕ್ಷಕರು ಕಚೇರಿ ಬಿಟ್ಟು ಶಾಲೆಗಳತ್ತ ಮುಖ ಮಾಡಬೇಕು. ಮಕ್ಕಳಿಗೆ ಮಾಠ ಮಾಡುವ ಮುಖಾಂತರ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರಲ್ಲಿ ಬದಲಾವಣೆಗೊಳಿಸುವ ಮುಖಾಂತರ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮುಂದಾಗಬೇಕು ಎಂದು ಹೇಳಿದರು.
ಉರ್ದು, ಮರಾಠಿ ಮತ್ತು ಇಂಗ್ಲೀಷ ಮಾಧ್ಯಮ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಆಸಕ್ತಿಯ ಕೊರತೆಯಿಂದ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಫೇಲಾಗುತ್ತಿರುವುದು ವಿಷಾದನೀಯ ಎಂದ ಅವರು, ಕೆಲವು ಮುಖ್ಯೋಪಾಧ್ಯಾಯರಲ್ಲಿ ಸಮಯ ಪ್ರಜ್ಞೆ ಇಲ್ಲದಂತಾಗಿದೆ ಎಂದರು.
ಸಿ.ಬಿ.ಕೋರೆ ಪಾಲಿಟೆಕ್ನಿಕ್ ಪ್ರಾಚಾರ್ಯ ದರ್ಶನ ಬಿಳ್ಳೂರ ಮಾತನಾಡಿ, ಶಿಕ್ಷಣ ಇಲಾಖೆ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮಹತ್ತರ ಜವಾಬ್ದಾರಿ ಮುಖ್ಯೋಪಾಧ್ಯಾರ ಮೇಲಿದ್ದು, ಸರಕಾರದ ಯೋಜನೆಗಳ ಲಾಭ ಮಕ್ಕಳಿಗೆ ಮುಟ್ಟಿಸುವ ಜತೆಗೆ ಭವಿಷ್ಯ ರೂಪಿಸಿಕೊಳ್ಳಲುಬೇಕಾಗುವಂತಹ ಕಾರ್ಯಾಗಾರಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಮಕ್ಕಳಿಗೆ ಭವಿಷ್ಯ ರೂಪಿಸಿಕೊಳ್ಳಲು ದಾರಿ ದೀಪವಾಗುವಂತಹ ಮಾರ್ಗದರ್ಶನ ಮತ್ತು ಉತ್ತಮ ಸಲಹೆಗಳನ್ನು ಶಿಕ್ಷಕರು ಕೊಡಬೇಕು ಎಂದು ಹೇಳಿದರು.
ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರೇವತಿ ಮಠದ, ಎಂ.ಆರ್.ಮುಂಜಿ, ಮೋಹನ ದಂಡಿನ, ಅರಿಹಂತ ಬಿರಾದಾರಪಾಟೀಲ,ಆಚಿಜನೇಯಪ್ಪಾ ಹಾಗೂ ವಿಷಯ ಪರಿವೀಕ್ಷಕರು, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೆಕಣಮರಡಿ ಸ್ವಾಗತಿಸಿದರು.