ಬುಧವಾರ , ಅಕ್ಟೋಬರ್ 9 2024
kn
Breaking News

ಮಲ್ಲಾಡಿಹಳ್ಳಿಯ ‘ತಿರುಕ’, ಅಭಿನವ ಧನ್ವಂತರಿ ಶತಯುಷಿ ಕರ್ಮಯೋಗಿ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಜನ್ಮದಿನದ ಪ್ರಯುಕ್ತ ಲೇಖನ

Spread the love

ಕೃಪೆ: ಕರ್ಮವೀರ ನವೆಂಬರ್ 4, 2012ರ ಸಂಚಿಕೆ.
ವರದಿ: ಕೆ.ವಾಯ್ ಮೀಶಿ

~ಮಲ್ಲಾಡಿಹಳ್ಳಿಯ ‘ತಿರುಕ’, ಅಭಿನವ ಧನ್ವಂತರಿ ಶತಯುಷಿ ಕರ್ಮಯೋಗಿ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಜನ್ಮದಿನದ ಶುಭಾಶಯಗಳು.

ಒಮ್ಮೆ ಎಲ್ಲೆಡೆ ಪ್ರಸಿದ್ಧವಾಗಿದ್ದ ಆ ಸಂಸ್ಥೆಗೆ ಹಿರಿಯ ಮಹನೀಯರೊಬ್ಬರು ಅತಿಥಿಗಳಾಗಿ ಆಗಮಿಸುವವರಿದ್ದರು. ರೈಲ್ವೇ ನಿಲ್ದಾಣದಲ್ಲಿ ಅವರನ್ನು ಒಬ್ಬ ಸಾಧಾರಣವಾದ ಕೂಲಿಯಂತಿದ್ದ ವ್ಯಕ್ತಿ ಬಂದು ತಾನು ತಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಅವರ ಸಾಮಾನು ಸರಂಜಾಮುಗಳನ್ನು ಬಲಭೀಮನಂತೆ ತಾನೇ ಹೊತ್ತ. ಅವರನ್ನು ಸಂಸ್ಥೆಯಲ್ಲಿ ಕರೆದುತಂದು ವಸತಿ ಸೌಕರ್ಯಗಳನ್ನೆಲ್ಲಾ ಪರಿಚಯ ಮಾಡಿಕೊಟ್ಟು ವಿಶ್ರಮಿಸಲು ಹೇಳಿ ಹೊರಡಲನುವಾದ. ಆಗ ಅತಿಥಿಗಳು ಕೇಳಿದರು, “ನಾನು ಬುದ್ಧಿಯವರನ್ನು ಯಾವಾಗ ಭೇಟಿ ಮಾಡಬಹುದು?”. “ತಾವು ವಿಶ್ರಮಿಸಿ ಸ್ನಾನ, ತಿಂಡಿ ಮುಗಿಸಿ ಅವರೇ ತಮ್ಮನ್ನು ಕಾಣುತ್ತಾರೆ” ಎಂದ ಈತ ಅಲ್ಲಿಂದ ಹೊರಟ. ಬಂದ ಗಣ್ಯ ಅತಿಥಿಗಳು ತಿಂಡಿ ಮುಗಿಸಿದರು, ಮಧ್ಯಾಹ್ನ ಊಟವೂ ಆಯಿತು, ಸಂಜೆಯೂ ಆಯ್ತು. ಎಲ್ಲಿ ನೋಡಿದರೂ ಬೆಳಿಗ್ಗೆ ಇವರನ್ನು ಕರೆತಂದವ ಎಲ್ಲರೊಂದಿಗೆ ಕೆಲಸ ಮಾಡುತ್ತಿದ್ದನೇ ಹೊರತು ಇವರು ಊಹಿಸಿದ್ದ ಮುಖ್ಯಸ್ಥ ಮಾತ್ರ ಕಾಣಲೇ ಇಲ್ಲ. ಮತ್ತೊಮ್ಮೆ ಆತನನ್ನೇ ಕೇಳಿದರು “ನಾನು ಬುದ್ಧಿಯವರನ್ನು ಭೇಟಿ ಆಗೋದು ಯಾವಾಗ?”. ಸಂಜೆ ಪ್ರಾರ್ಥನೆಯ ನಂತರ ಅವರು ನಿಮ್ಮನ್ನು ಭೇಟಿಯಾಗುತ್ತಾರೆ ಉತ್ತರ ಬಂತು. ಪ್ರಾರ್ಥನೆ ಮುಗಿದಾಗ ಇವರು ಕಾಯುತ್ತಿದ್ದ ಹಾದಿಯಲ್ಲಿ ಆ ಬುದ್ಧಿಯವರ್ಯಾರೂ ಕಾಣದೆ, ಇತ್ತ ಬರುತ್ತಿದ್ದುದು ಅದೇ ಕೂಲಿಯವ. ಇವನನ್ನು ನಂಬಿದರೆ ಉಪಯೋಗವಿಲ್ಲ ಎಂದು ಅಲ್ಲೇ ಹತ್ತಿರದಲ್ಲಿದ್ದ ಮತ್ತೊಬ್ಬನನ್ನುಅತಿಥಿಗಳು ಕೇಳಿದರು. ಏನಪ್ಪಾ’ನನಗೆ ಬುದ್ಧಿಯವರು ಬೆಳಗ್ಗಿನಿಂದ ಕಾಣಿಸ್ತಾನೇ ಇಲ್ವಲ್ಲ?” ಆ ವ್ಯಕ್ತಿ ಅಚ್ಚರಿಯಿಂದ ಉತ್ತರಿಸಿದ “ಅವರು ಆಶ್ರಮ ಬಿಟ್ಟು ಎಲ್ಲೂ ಹೊಗಿಲ್ವಲ್ಲ ಸ್ವಾಮಿ, ನೋಡಿ ಇಲ್ಲೇ ಬರುತ್ತಿದ್ದಾರೆ ಎಂದು ಅದೇ ಕೂಲಿಯವನಂತಿದ್ದ ವ್ಯಕ್ತಿಯತ್ತ ಕೈತೋರಿದ.” ಬಂದಿದ್ದ ಅತಿಥಿಗಳು ತಲ್ಲಣಿಸಿದರು. “ಬೆಳಗ್ಗೆ ಕೂಲಿಯಂತೆ ಬಂದು ಹಗಲಿರುಳೂ ಎಲ್ಲರೊಂದಿಗೆ ಒಬ್ಬನಾಗಿ ಬಿಡುವಿಲ್ಲದೆ ಶ್ರಮಿಸುತ್ತಿದ್ದ ಇವರೇ ತಾವು ಭೇಟಿಯಾಗಲು ಹಂಬಲಿಸುತ್ತಿದ್ದ ‘ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳೇ!” ಅವರ ಮನಸ್ಸು ಮೂಖವಾಗಿತ್ತು.

ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಮಲ್ಲಾಡಿಹಳ್ಳಿ ಸ್ವಾಮಿಗಳೆಂದೇ ಖ್ಯಾತನಾಮರು. ‘ತಿರುಕ’ ಇವರ ಕಾವ್ಯನಾಮ. ಸದಾ ಶ್ವೇತವಸ್ತ್ರಧಾರಿಗಳಾಗಿ, ಹಸನ್ಮುಖರಾಗಿದ್ದವರು. ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು. ಒಂದು ವಾಸ್ತವ ಸಂಗತಿಯೆಂದರೆ ತಮ್ಮನ್ನು ಕಾಡುತ್ತಿದ್ದ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಇವರು ಯೋಗಕ್ಕೆ ಮೊರೆಹೋದರು. ನಿರಂತರ ಯೋಗಾಭ್ಯಾಸದಿಂದಾಗಿ ಅವರ ಅನೇಕ ಕಾಯಿಲೆಗಳು ದೂರವಾದವು. ಅವರ ಶಿಸ್ತುಬದ್ಧ ಯೋಗಾಸನಗಳೇ ಅವರ ಆರೋಗ್ಯದ ಗುಟ್ಟು; ಶತಾಯುಷಕ್ಕೆ ಕಾರಣ. ಮಲ್ಲಾಡಿಹಳ್ಳಿಯಲ್ಲಿ ಅನಂತ ಸೇವಾಶ್ರಮವನ್ನು ಸ್ಥಾಪಿಸಿದರು. ಜನರಿಂದ ‘ಸ್ವಾಮೀಜಿ’ ಎಂದು ಕರೆಸಿಕೊಂಡ ಇವರು ನಾವು ಕಾಣುವ ಇತರ ಸ್ವಾಮೀಜಿಗಳಂತಲ್ಲ. ಕಾವಿ ಧರಿಸಲಿಲ್ಲ. ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದರು. ಕಟ್ಟುನಿಟ್ಟಿನ ದಿನಚರಿಯ, ಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ. ಸೇವೆಗಾಗಿನ ಬದುಕು.

ಮಲ್ಲಾಡಿಹಳ್ಳಿ ಸ್ವಾಮಿಗಳು ಜನಿಸಿದ ದಿನ 18.03.1891. ಮೂಲತಃ ಕೇರಳದಲ್ಲಿ ಹುಟ್ಟಿದರೂ ಮಲ್ಲಾಡಿಹಳ್ಳಿ ಸ್ವಾಮಿಗಳು ತಮ್ಮ ಸಂಬಂಧವನ್ನು ಮಲ್ಲಾಡಿಹಳ್ಳಿಯಲ್ಲಿ ಮಿಳಿತಗೊಳಿಸಿ, ಕನ್ನಡ ನೆಲದ ಮಣ್ಣಿನ ಮಗನಾದರು. 106 ವರ್ಷಗಳ ಕಾಲ ಸುದೀರ್ಘವಾಗಿ ಬದುಕಿ, ಅನೇಕರನ್ನು ತಮ್ಮ ಮಾರ್ಗದರ್ಶನದಿಂದ ಬದುಕಿಸಿದ ಮಲ್ಲಾಡಿಹಳ್ಳಿಯ ಈ ಸ್ವಾಮಿಗಳು 1996ರಲ್ಲಿ ಬೆಂಗಳೂರಿನಲ್ಲಿ ತಮ್ಮ ಲೌಕಿಕದ ವ್ಯಾಪಾರವನ್ನು ಮುಗಿಸಿದರು.

ಮಲ್ಲಾಡಿಹಳ್ಳಿ ಸ್ವಾಮಿಗಳು ಒಬ್ಬ ಮಹಾಸಾಧಕರು, ತಪಸ್ವಿಗಳು, ಪರಮಯೊಗಾಚಾರ್ಯರು, ಮಹಾಸಂಘಟಕರು, ಸಾರ್ಥಕ ಬದುಕಿನ ನಿಷ್ಕಾಮ ಕರ್ಮಯೋಗಿ. ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ‘ಅಭಿನವ ಧನ್ವಂತರಿ’ಯೆಂದೇ ಜನಪ್ರಿಯರು. ಚಿತ್ರದುರ್ಗ ಜಿಲ್ಲೆಯ ‘ಹೊಳಲ್ಕೆರೆ ತಾಲ್ಲೂಕಿರುವ – ಮಲ್ಲಾಡಿಹಳ್ಳಿಗೆ ಅವರು ಬಂದದ್ದು, ಅಲ್ಲಿನ ಜನರ ಪಾಲಿಗೆ ವರದಾನವಾಯಿತು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು.

ಮಲ್ಲಾಡಿಹಳ್ಳಿ ಸ್ವಾಮಿಗಳವರ ತಂದೆ ಅನಂತ ಪದ್ಮನಾಭ ನಂಬೂದರಿ, ಮೂಲತಃ ಕೇರಳದ ಜ್ಯೋತಿಷ್ಯ ವಿದ್ವಾಂಸರು, ಮಹಾಪಂಡಿತರು; ತಮ್ಮ ಬಳಿಗೆ ಬರುತ್ತಿದ್ದ ಜನಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ‘ಪದ್ಮಾಂಬಾಳ್’ ಅವರ ತಾಯಿ, ಮಹಾಸಾಧ್ವಿ. ಅವರಿಗೆ ಜನಿಸಿದ ಮಗುವಿನ ಹೆಸರು ‘ಕುಮಾರಸ್ವಾಮಿ’ ಎಂದು. ಹುಟ್ಟಿದಾಗಲೇ ಆ ಶಿಶು, ‘ಬಾಲರೋಗ’ಕ್ಕೆ ತುತ್ತಾಯಿತು. ಸುಮಾರು 14 ವರ್ಷ, ಯಾವ ಭಾವನೆಯನ್ನೂ ಅನುಭವಿಸದ, ಆ ಪ್ರಜ್ಞಾಶೂನ್ಯ ಮಗುವಿನ ಮಾತೆ, ದೂರದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯುತ್ತಾರೆ. ಪದ್ಮಾಂಬ ಹಾಗೂ ನಂಬೂದರಿಯವರು ನಿಶ್ಯಕ್ತಿ, ವೃದ್ಧಾಪ್ಯ ಹಾಗೂ ರೋಗಗಳಿಂದ ಬೆಂಡಾಗಿ ಹೋಗಿದ್ದರು. ಆದರೂ 14 ವರ್ಷದ ಮಗನನ್ನು ಎತ್ತಿಕೊಂಡೇ ಕಾಡಿನ ದುರ್ಗಮ ಹಾದಿಯಲ್ಲಿ ಅವರ ‘ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ’ ಸಾಗಿತ್ತು. ದಕ್ಷಿಣ ಕನ್ನಡದ ಬಾರಕೂರು ಎಂಬ ಗ್ರಾಮಕ್ಕೆ ಬಂದು, ಶ್ರೀ ನರಸಿಂಹಯ್ಯನವರ ಮನೆಯಲ್ಲಿ ತಂಗಿದರು.

ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳು, ಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದ ಮೇಲೆ, ತಾಯಿ ಪದ್ಮಾಂಬಾಳ್ ಅವರಿಗೆ ಸ್ವಲ್ಪ ಸಮಾಧಾನವಾಯಿತು. ಮಂತ್ರಾಲಯದ ಯತಿಗಳು ಆ ಬಾಲಕನನ್ನು ‘ರಾಘವೇಂದ್ರ’ ಎಂದು ಕರೆದರು. ಅಷ್ಟು ಹೊತ್ತಿಗೆ ಪದ್ಮಾಂಬಾಳ್ ಅವರ ಆರೋಗ್ಯ ತೀರ ಹದಗೆಟ್ಟಿದ್ದು, ಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆ, ಮಗನ ಈ ಸ್ಥಿತಿಯನ್ನು ನೋಡಲಾರದೆ ಕೊರಗುತ್ತಾ ಬಾರಕೂರಿನಲ್ಲೆ ಅಸುನೀಗಿದರು. ನಂಬೂದರಿಯವರು ಆ ಬಾಲಕನನ್ನು ಗೆಳೆಯ ಭಿರ್ತಿಯ ರಾಮಚಂದ್ರಶಾಸ್ತ್ರಿಗಳ ಸಲಹೆಯಂತೆ ಯಕ್ಷಗಾನ ಪಂಡಿತ, ವಾಗ್ಮಿ, ರಾಮಾಯಣ ಮಹಾಭಾರತ ವ್ಯಾಖ್ಯಾನಕಾರ ನರಸಿಂಹಯ್ಯ ಮತ್ತು ಅವರ ಮಡದಿ ಪುತ್ಥಲೀಬಾಯಿಗೆ ಕ್ರಿ.ಶ. 1906ರ ಯುಗಾದಿಯಂದು ಒಪ್ಪಿಸಿ ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟರು.

ಕುಮಾರಸ್ವಾಮಿಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ ಪುತ್ಥಲೀಬಾಯಿ ಅವನಲ್ಲಿ ಗಮನಾರ್ಹ ಬದಲಾವಣೆ ಮೂಡಿಸಿದರು. ದಿನ ಕಳೆದಂತೆ ಹುಡುಗನಲ್ಲಿ ಪವಾಡಸದೃಶ ಬದಲಾವಣೆ ಉಂಟಾಯಿತು. ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದ.

ರಾಘವೇಂದ್ರರ ಜೀವನದಲ್ಲಿ ಹೊಸ ತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ, ಅವರ ಬಾಲ್ಯದ ಗುರುಗಳಾದ, ಶಿವರಾಮಯ್ಯ, ‘ತಾರಕಮಂತ್ರ’ ಉಪದೇಶಿಸಿದ ನಿತ್ಯಾನಂದಸ್ವಾಮಿ, ರಂಗನಾಥಭಟ್ಟರು, ವರೂಢದ ಶಿವಾನಂದ ಶ್ರೀಗಳು, ಬರೋಡದ ಪ್ರೊ. ಮಾಣಿಕ್ಯರಾವ್, ಪಳನಿಸ್ವಾಮಿ ಬಹಳ ಮುಖ್ಯರು. ತಾರಕಮಂತ್ರ (ಶಕ್ತಿಪಾತ ಯೋಗ)ವನ್ನು ಉಪದೇಶಿಸುವಾಗ, ಸ್ವಾಮಿ ನಿತ್ಯಾನಂದರು, ರಾಘವರ ಮಸ್ತಕದ ಮೇಲೆ ತಮ್ಮ ಕೈ ಇಟ್ಟರು. ಅನೇಕ ಯೋಗಿವರ್ಯರೂ ಅವರಿಗೆ ಬೋಧಿಸಿದರು. ‘ದೇವರು’ ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದವರು ಯತಿವರ್ಯ ಸ್ವಾಮಿ ಶಿವಾನಂದರು. ರೋಗಿಗಳಲ್ಲಿ, ದೀನರಲ್ಲಿ, ಆರ್ತರಲ್ಲಿ ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು, ದೇವರು – ಎಂಬುದು ಒಂದು ದೃಷ್ಟಿಕೋನ – ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು ಭಾವಶುದ್ಧಿ ಬೆಳೆಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗಾಗಿತ್ತು.

ರಾಘವೇಂದ್ರರ ಪ್ರೌಢಶಾಲೆಯ ಪದವಿಪೂರ್ವ ವಿದ್ಯಾಭ್ಯಾಸ ಕುಂದಾಪುರದಲ್ಲಾಯಿತು. ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, 130 ವರ್ಷ ಬದುಕಿದ್ದ ಜುಮ್ಕಾದಾದಾರವರ ಶಿಷ್ಯ ಬಾಲಬ್ರಹ್ಮಚಾರಿ, ಪ್ರೊಫೆಸರ್ ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ ಜುಮ್ಕಾದಾದಾ ವ್ಯಾಯಾಮಶಾಲೆಯಲ್ಲಿ ಶಬ್ಧವೇಧಿ ಕಲೆಯನ್ನು ಕಲಿತರು. ಅಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಲಾಹೋರಿನ ವೈದ್ಯಶ್ರೇಷ್ಠರಾದ, ‘ಆಚಾರ್ಯ ಬಾಬಾ ಲಕ್ಷ್ಮಣದಾಸ’ ಅವರ ಸಮ್ಮುಖದಲ್ಲಿ ಪದವಿ ಪಡೆದರು. ಇದಕ್ಕೆ ಮೊದಲು ಲಕ್ಷ್ಮಣದಾಸ್ ಅವರ ಕೈವಲ್ಯಧಾಮ ಆಶ್ರಮದಲ್ಲಿ ಆಯುರ್ವೇದ, ಸಿದ್ಧವಿದ್ಯೆ, ಅಸ್ತಿ ಸಂಧಾನ ಕಲೆ, ಯುನಾನಿ ವೈದ್ಯ ಪದ್ಧತಿ ಕಲಿತರು. ಲಾಹೋರಿಗೆ ಹೋಗುವ ಮೊದಲೇ ಅವರಿಗೆ 368 ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು. ಸೂರ್ಯನಮಸ್ಕಾರಗಳು, ಯೋಗಾಸನಗಳು, ಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆ, ಯೋಗವಿದ್ಯೆಯಲ್ಲಿ ನಿಷ್ಣಾತರಾದರು. ರಾಘವೇಂದ್ರರಲ್ಲಿ ದಿವ್ಯ ತೇಜಸ್ಸಿತ್ತು. ಯೋಗಾಭ್ಯಾಸದಿಂದ ವಜ್ರಕಾಯರಾಗಿದ್ದರು. ಅವರ ಅಂಗಸೌಷ್ಟವ, ಶರೀರದ ಆಕೃತಿ, ಶಿಲ್ಪಿಗಳಿಗೂ, ಶಿಲ್ಪಚಿತ್ರಕಾರರಿಗೂ ಪ್ರೇರಣೆ ನೀಡುವಂತಿತ್ತು.

ಭಟ್ಕಳದಲ್ಲಿ ಮಾರುತಿ ವ್ಯಾಯಾಮಶಾಲೆ ಉದ್ಘಾಟಿಸಿದರು. ರಾಘವೇಂದ್ರರು ಸ್ಥಾಪಿಸಿದ ‘ಅನಂತ ಸೇವಾಶ್ರಮ’ ಅನಾಥರಿಗೆ, ಬಡಮಕ್ಕಳಿಗೆ, ಒಂದು ‘ಸೇವಾಕುಟೀರ’ವಾಗಿ ಬೆಳೆಯಿತು. ಅವರ ಶಿಷ್ಯ ‘ಸೂರದಾಸ ಜೀ’ (ಪೂರ್ವಾಶ್ರಮದಲ್ಲಿ ಸೂರ್ಯನಾರಾಯಣ) ಅವರೊಡಗೂಡಿ ಅನಾಥಸೇವಾಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.

ತಂತ್ರ ಯೋಗಶಾಸ್ತ್ರದ ‘ಅಷ್ಟಾಂಗ ಯೋಗ’ಗಳನ್ನು ಆಸಕ್ತರಿಗೆ, ಆಸ್ತಿಕರಿಗೆ ತಿಳಿಯಹೇಳಿದರು.

ಪ್ರತೀವರ್ಷವೂ ಶ್ರಾವಣಮಾಸದಲ್ಲಿ ಒಂದು ತಿಂಗಳು ‘ಮೌನವ್ರತ’ ಧಾರಣೆಮಾಡುತ್ತಿದ್ದರು.

ಮಲ್ಲಾಡಿಹಳ್ಳಿಯ ಸ್ವಾಮಿಗಳು ಅನೇಕ ಅತ್ಯಮೂಲ್ಯ ಪುಸ್ತಕಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. 4 ಕಾವ್ಯಗಳು, 9 ಕಾದಂಬರಿಗಳು, 12 ನಾಟಕಗಳು, 2 ಗೀತ ನಾಟಕ, 7 ಏಕಪಾತ್ರಾಭಿನಯ, 1 ವಚನ ಸಾಹಿತ್ಯ 3 ಕಥಾ ಸಂಕಲನ, 4 ಆಯುರ್ವೇದ, 4 ಯೋಗ (ಇದರಲ್ಲಿ “ಬೃಹತ್ ಯೋಗ ದರ್ಶನ” ಯೋಗ ಸಂಪುಟವೂ ಇದೆ) 5 ವ್ಯಾಯಾಮ, 2 ಇತರೆ 1 ಆತ್ಮ ನಿವೇದನೆ 3 ಜೋಳಿಗೆ ಪವಾಡ – ಇದು ರಾಘವೇಂದ್ರರ ಆತ್ಮಚರಿತ್ರೆ.

ಕರ್ನಾಟಕ ಸರ್ಕಾರ, ಇವರನ್ನು ಸನ್ಮಾನಿಸಲು ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳ ಬಗ್ಗೆ ಬಹಳ ಸಾರಿ ಪ್ರಸ್ತಾಪಿಸಿದಾಗ ಅವರ ಉತ್ತರ, “ಅವೆಲ್ಲಾ ನನಗೆ ಬೇಡ; ಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆ ಇದೆ. ಅದನ್ನು ಕೊಡಿ”. ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಬಗ್ಗೆ ತಿಳಿಸಿದಾಗಲೂ ಅವರ ನಿಲುವು ಬದಲಾಗಲಿಲ್ಲ. ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು. ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ. ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ ಅಲ್ಪಸ್ವಲ್ಪ ಹಣ ಅವರ ಸರ್ವೋದಯ ಮುದ್ರಣಾಲಯದಿಂದ ಬರುತ್ತಿತ್ತು. ತಮ್ಮ ಜೋಳಿಗೆ ತಗಲುಹಾಕಿಕೊಂಡು ಭಿಕ್ಷೆಗೆ ಹೋಗುತ್ತಿದ್ದರು.

1991ರಲ್ಲಿ ರಾಘವೇಂದ್ರರ 100ನೇ ಹುಟ್ಟಿದ ಹಬ್ಬವನ್ನು ಊರಿನ ಜನ ಹಾಗೂ ಆಶ್ರಮದ ಹಿತೈಷಿಗಳು ಆಚರಿಸಿದರು. ಆ ಸಮಯದಲ್ಲಿ ಅವರು ಬರೆದ ಪುಟ್ಟ ಪುಸ್ತಕ ‘ಆತ್ಮ ನಿವೇದನೆ’ ಹೊರಗೆ ಬಂತು. ಆತ್ಮಚರಿತ್ರೆ, ‘ಜೋಳಿಗೆಯ ಪವಾಡ’ ಬರೆದರು. ಆಗಲೇ ಹೃದಯಾಘಾತದಿಂದ ನರಳಿದ್ದರು. ಪುನಃ 1996ರಲ್ಲಿ ಅವರಿಗೆ ಮತ್ತೆ ‘ಹೃದಯಾಘಾತವಾಯಿತು.

ತಿಂಗಳ ಮೇಲೆ ‘ಕೋಮಾ’ದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ. ‘ಬುತ್ತಿ ಗಂಟು ತೀರಿತಿನ್ನು, ಹೊರಟೆ ನನ್ನ ಊರಿಗೆ’ ಎನ್ನುತ್ತಾ ಆಗಸ್ಟ್ 31, 1996ರಂದು ಇಹ ತೊರೆದು ಪರದೆಡೆಗೆ ನಡೆದರು.

ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿ, ಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದು, ತಮ್ಮ ಜೀವನವನ್ನು ‘ಸಾರ್ಥಕ’ಗೊಳಿಸಿದ ಮಹಾಚೇತನ, ಅನಂತದಲ್ಲಿ ಲೀನವಾಯಿತು.

ಸ್ವಾಮಿಗಳು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳು, ಮಕ್ಕಳ ವಸತಿ ಗೃಹಗಳು, ಬನಶಂಕರಿ ಅಮ್ಮನ ದೇವಸ್ಥಾನ, ಕಾಲೇಜುಗಳು, ದೈಹಿಕ ಶಿಕ್ಷಣ ಕಾಲೇಜು, ಆಯುರ್ವೇದ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು ಇಂದು ವಿಸ್ತೃತವಾಗಿ ಬೆಳೆದು ಉತ್ತಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page