ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಠಾಣೆ ಕೆಲಸ ಬಿಟ್ಟು ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಮಾರಂಭ ಮಾಡುವಂತಿಲ್ಲ. ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಯಾವ ಪೊಲೀಸ್ ಸಿಬ್ಬಂದಿಯೂ ಸಾರ್ವಜನಿಕ ಸಭೆಗಳಿಗೆ ಅತಿಥಿಗಳಾಗಿ ಹೋಗುವಂತಿಲ್ಲ. ಫೋಟೋ ಸೆಷನ್ ವಿಡಿಯೋ ಮಾಡುವಂತಿಲ್ಲ. ವೈಟ್ ಕಾಲರ್ ಕ್ರಿಮಿನಲ್‌ಗಳ ಜತೆ ಸಂಪರ್ಕ ಬೆಳೆಸಿ ಫೋಟೋ ತೆಗೆಸಿಕೊಳ್ಳುವಂತಿಲ್ಲ. ಫೇಸ್‌ಬುಕಲ್ಲಿ ಅಭಿಮಾನಿ ಸಂಘ ಕಟ್ಟಿಕೊಳ್ಳುವಂತಿಲ್ಲ. ಸಿಂಗಂ ಎಂದು ಬಿಂಬಿಸುವ ವಿಡಿಯೋ ಹಾಕುವಂತಿಲ್ಲ.
ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ರಾಜ್ಯ ಪೊಲೀಸ್ ಠಾಣೆಗಳಿಗೆ ರವಾನಿಸಿರುವ ಸಂದೇಶವಿದು. ಅಭಿಮಾನಿ ಬಳಗ ಕಟ್ಟಿಕೊಂಡು ಫೇಸ್ ಬುಕ್ ನಲ್ಲಿ ಮಿಂಚುತ್ತಿದ್ದ ಪೊಲೀಸ್ ಸಿಂಗಂಗಳ ಸಾಮಾಜಿಕ ಜಾಲ ತಾಣದ ಅಭಿಮಾನಿ ಕೂಟಗಳಿಗೆ ಇದೀಗ ಬ್ರೇಕ್ ಬೀಳಲಿದೆ.
ಇದು ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿ ಚರ್ಚೆಗೆ ನಾಂದಿ ಹಾಡಿತ್ತು. ಇದಾದ ಬಳಿಕವೂ ಹಲವು ಪೊಲೀಸ್ ಅಧಿಕಾರಿಗಳ ಸಾಮಾಜಿಕ ಜಾಲ ತಾಣದಲ್ಲಿ ಅಭಿಮಾನಿ ಕೂಟ ಕಟ್ಟಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಬೆಳವಣಿಗೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಮಹಾ ನಿರ್ದೇಶಕರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಆದೇಶಕ್ಕೆ ನಾಂದಿ ಹಾಡಿದ ಪ್ರಕರಣ: ಹೊಸಕೋಟೆಯಲ್ಲಿ ಇತ್ತೀಚೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿದ ಪೊಲೀಸ್ ಅಧಿಕಾರಿ ಪೊಲೀಸ್ ಠಾಣೆಯಲ್ಲಿಯೇ ಸಮಾರಂಭ ಆಯೋಜಿಸಿದ್ದರು. ಕ್ರಿಮಿನಲ್‌ಗಳ ಜತೆ ತೆಗೆಸಿಕೊಂಡಿದ್ದ ಪೋಟೋ ಕೂಡ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಕೆಲ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲ ತಾಣದಲ್ಲಿ ಅಭಿಮಾನಿ ಕೂಟ ಕಟ್ಟಿಕೊಂಡು “ಸಿಂಗಂ” ಎನಿಸಿಕೊಳ್ಳುತ್ತಿದ್ದವರ ಬಗ್ಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ವೈಯಕ್ತಿಕ ಬರಹ ಪ್ರಕಟಿಸಿದ್ದರು.
ಪೊಲೀಸ್ ಠಾಣೆಗಳು ಕೇವಲ ಸಾರ್ವಜನಿಕ ಸೇವೆಗೆ ಸೀಮಿತವಾಗಿರಬೇಕು. ಯಾವುದೇ ಸಭೆ ಸಮಾರಂಭ ಮಾಡಬಾರದು. ಅಪರಾಧಿಗಳ ಜತೆ ಸಂಪರ್ಕ ಹೊಂದಬಾರದು. ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕಾರ್ಯಕ್ರಮ ಬಿಟ್ಟು ಬೇರೆ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಪ್ರಮುಖವಾಗಿ ಸಾಂಆಜಿಕ ಜಾಲ ತಾಣದಲ್ಲಿ ಬಿಲ್ಡಪ್ ವಿಡಿಯೋ ಹಾಕುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ. ಈ ಅದೇಶದ ಪ್ರತಿಯನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ.