ಅಥಣಿ : ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಿ ನನ್ನನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.
ಇಲ್ಲಿಯ ಹೊರವಲಯದಲ್ಲಿರುವ ನೂರಾಣಿ ನಾಲ್ಬಂದ್ ಕಲ್ಯಾಣ ಮಂಟಪದಲ್ಲಿ ಗುರುವಾರದಂದು ಜರುಗಿದ ಅಥಣಿ-ಕಾಗವಾಡ ಮತಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಗಳ ಬಲವರ್ಧನೆಗಾಗಿ ಯಾವುದೇ ಪಕ್ಷ ಸೇರದೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬೆಂಬಲಿಸಿ ಆಶೀರ್ವಾದ ಮಾಡುವಂತೆ ಕೋರಿದರು.
ಅಥಣಿ ಭಾಗದೊಂದಿಗೆ ತಾವು ನಿರಂತರ ಸಂಪರ್ಕ ಹೊಂದಿದ್ದೇವೆ. ಎಲ್ಲ ಸಮಾಜ ಬಾಂಧವರೊಂದಿಗೆ ಸಹೋದರತ್ವ ಭಾವನೆಯಿಂದ ನಡೆದುಕೊಳ್ಳುತ್ತಿದ್ದೇವೆ. ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಅಥಣಿ ತಾಲೂಕಿನ ಜನರ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ತರುವುದಿಲ್ಲ. ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಮೂಲಕ ಜನಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ಲಖನ್ ಜಾರಕಿಹೊಳಿ ಮನವಿ ಮಾಡಿಕೊಂಡರು.
ಯಾವುದೇ ಪಕ್ಷ ಸೇರಿದರೆ ಆ ಪಕ್ಷಗಳಲ್ಲಿರು ವ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕೆಲಸ ಮಾಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಹಕಾರದೊಂದಿಗೆ ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ. ನನ್ನ ಶೇಜ್ ನಂ. 5 ಇದ್ದು, ನನ್ನ ಭಾವಚಿತ್ರದ ಮುಂದೆ 1 ಅಂತಾ ಬರೆದು ಪ್ರಥಮ ಪ್ರಾಶಸ್ತ್ಯದ ಮತದೊಂದಿಗೆ ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ಆಯ್ಕೆ ಮಾಡಿ ಆಶೀರ್ವಾದ ಮಾಡುವಂತೆ ಲಖನ್ ಜಾರಕಿಹೊಳಿ ಕೋರಿದರು.
ಈ ಸಂದರ್ಭದಲ್ಲಿ ಉದ್ಯಮಿ ಉತ್ತಮ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಸುರೇಶ ಮಾಯನ್ನವರ, ಸಿದ್ದಪ್ಪ ಮುದಕನ್ನವರ, ಮುಖಂಡರಾದ ನಿಂಗಪ್ಪ ನಂದೇಶ್ವರ, ರಾವಸಾಬ ಬೇವನೂರ, ಅಮೂಲ ನಾಯ್ಕ, ಎ.ಸಿ. ಪಾಟೀಲ, ರಾಮಗೌಡ ಗುಮತಾಜ್, ಬಸು ಯಡೂರ, ರಮೇಶ ಪಾಟೀಲ, ರವೀಂದ್ರ ಕಡಕೋಳ ಹಾಗೂ ಅಥಣಿ-ಕಾಗವಾಡ ಮತಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.