ಮೂಡಲಗಿ: ರಕ್ತದಾನದಿಂದಾಗಿ ಆರೋಗ್ಯ ವೃದ್ಧಿಯ ಜೊತೆಗೆ ಮಾನಸಿಕ ಸ್ಥಿತಿ ಮಿತಿಗಳು ಹತೋಟಿಯಲ್ಲಿ ಇರುತ್ತವೆ ಎಂದು ನಿವೃತ್ತ ತಾಲೂಕಾ ವೈಧ್ಯಾಧಿಕಾರಿ ಡಾ. ಆರ್.ಎಸ್ ಬೆನಚಣಮರಡಿ ಹೇಳಿದರು.
ಅವರು ಪಟ್ಟಣದ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಚಿಕ್ಕೋಡಿಯ ಮಾತೋ ಶ್ರೀ ರಕ್ತ ಬಂಡಾರ ಕೇಂದ್ರ, ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜು, ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರ, ಯುವ ಜೀವನ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಐಚ್ಛಿಕ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ಬದಲಾದ ಜೀವನ ಶೈಲಿಯಿಂದಾಗಿ ಮನುಷ್ಯರಿಗೆ ರೋಗ ರುಜುನುಗಳು ಹೆಚ್ಚಾಗುತ್ತಿವೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಸಾಧ್ಯವಾಗುತ್ತಿಲ್ಲ. ಪ್ರತಿ ನಿತ್ಯ ಉತ್ತಮ ಆಹಾರ, ವ್ಯಾಯಾಮದ ಜೊತೆಗೆ ಶರೀರ ಸದೃಢವಾಗಿಟ್ಟುಕೊಳ್ಳ ಬೇಕು. ರಕ್ತದಾನ ಮಾಡುವದರಿಂದ ಶರೀರವು ಚೇತನಗೊಳ್ಳುವದು. ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ದಾನ ನೀಡಿರುವ ರಕ್ತವು ಜೀವವನ್ನು ಕಾಪಾಡುತ್ತೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಬಾಗೋಜಿಕೊಪ್ಪ ಶಿವಯೋಗಿಶ್ವರ ಹಿರೇಮಠದ ಮ.ಘ.ಚ ಡಾ. ಶಿವಲಿಂಗ ಮುರಘರಾಜೇಣದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ, ಸಾಂಸ್ಕøತಿಕವಾಗಿ ಧ್ಯೇಯೋದ್ಧೇಶಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕು. ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಮಹಾನ ಕಾರ್ಯವಾಗಿದೆ ಎಂದು ನುಡಿದರು.
ಮಂಜುನಾಥ ಸೈನಿಕ ತರಭೇತಿ ಕೇಂದ್ರದ ಅಧ್ಯಕ್ಷ ಎಲ್.ವಾಯ್ ಅಡಿಹುಡಿ, ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಸ್ ಪಾಟೀಲ ಮಾತನಾಡಿ, ಸಹಾಯ ಸಹಕಾರದಿಂದ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಸಂಘಟನೆಯ ಜೊತೆಗೆ ಶಾರೀರಿಕ ಆರೋಗ್ಯ ಸುಧಾರಿಸುತ್ತದೆ. ರಕ್ತದಾನ ಮೂಲಕ ಅತ್ಯಮೂಲ್ಯ ಜೀವಗಳನ್ನು ಕಾಪಾಡುವ ಕಾರ್ಯದಲ್ಲಿ ಎಲ್ಲರೂ ಕೈಜೊಡಿಸಬೇಕು ಎಂದು ಹೇಳಿದರು.
ಶಿಬಿರದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಯುವ ಜೀವನ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ, ಸೋಮಯ್ಯ ಹಿರೇಮಠ, ವರ್ದಮಾನ ಜರಾಳೆ, ಬೀರು ವನಶೆಣ್ಣಿ ಹಾಗೂ ಪಟ್ಟಣದ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯವರು ರಕ್ತದಾನ ಶಿಬಿರದಲ್ಲಿ ಭಾಗವಹಿದ್ದರು.
Sarvavani Latest Kannada News