ಜಯ ಕರ್ನಾಟಕ ಸಂಘಟನೆಯ ಸ್ಥಾಪಕ, ಮಾಜಿ ಭೂಗತ ದೊರೆ ಮುತ್ತಪ್ಪ ರೈ (68) ನಿಧನರಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಲಿವರ್ ಹಾಗೂ ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಗುರುವಾರ ತಡರಾತ್ರಿ 2 ಗಂಟೆ ಹೊತ್ತಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮುತ್ತಪ್ಪ ರೈ ನಿಧನರಾಗಿದ್ದಾರೆಂಬ ಸುದ್ದಿ ಬುಧವಾರ ರಾತ್ರಿಯೇ ಹರಡಿತ್ತು. ಆದರೆ ಆಸ್ಪತ್ರೆ ರೈ ನಿಧನವನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ.
ಪುತ್ತೂರಿನ ಮುತ್ತಪ್ಪ ರೈ ಕಳೆದ ಏಪ್ರಿಲ್ 28ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ (ಮೇ 13) ಅವರ ಅರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಅವರ ಪತ್ನಿ ರೇಖಾ 2013ರಲ್ಲಿ ಸಿಂಗಾಪುರದಲ್ಲಿ ಮೃತಪಟ್ಟಿದ್ದಾರೆ.
ಕಳೆದ ಜನವರಿ 20 ರಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ಮುತ್ತಪ್ಪ ರೈ, ‘2018ರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತು. ನಂತರದಲ್ಲಿ ಪರೀಕ್ಷೆ ಮಾಡಲಾಗಿ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೋಲೊ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ. ಲಿವರ್ ಕ್ಯಾನ್ಸರ್ ಗುಣವಾಯಿತು. ಆದರೆ ಮೆದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಪತ್ತೆಯಾಯಿತು.
‘ಕ್ಯಾನ್ಸರ್ ನನ್ನನ್ನು ಸಾವಿನ ದವಡೆಗೆ ನೂಕಿರುವುದು ನಿಜ. ಆದರೆ ಪವಾಡಸದೃಶ ರೀತಿಯಲ್ಲಿ ಬದುಕುತ್ತಿದ್ದೇನೆ. ಕೆಲವು ತಿಂಗಳಷ್ಟೆ ಬದುಕುವುದಾಗಿ ವೈದ್ಯರು ಹೇಳಿಬಿಟ್ಟಿದ್ದಾರೆ. ಹಾಗಾಗಿ ಕೊನೆಯ ದಿನಗಳನ್ನು ಕಳೆಯಲು ರಾಮನಗರದ ಬಿಡದಿಗೆ ಬಂದಿದ್ದೇನೆ’ ಎಂದು ಹೇಳಿದ್ದರು.
‘ಐದು ಗುಂಡು ಬಿದ್ದರೂ ಬದುಕಿದವನು. ಸಾವಿಗೆ ಹೆದರುವುದಿಲ್ಲ. ವಿಲ್ ಪವರ್ ನಿಂದ ಬದುಕುತ್ತಿದ್ದೇನೆ. ಸಮಾಜ ಸೇವೆ ಮುಂದುವರಿಸುತ್ತೇನೆ’ ಎಂದು ಭೂಗತರಾಗಿದ್ದುಕೊಂಡೇ ಒಂದು ಕಾಲದಲ್ಲಿ ಇಡೀ ಬೆಂಗಳೂರನ್ನೇ ನಡುಗಿಸಿದ್ದ ಮುತ್ತಪ್ಪ ರೈ ಹೇಳಿದ್ದರು.
‘ವರ್ಷಕ್ಕೆ 25-30 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ಆಸ್ತಿ ಕುರಿತು ಈಗಾಗಲೇ ವಿಲ್ ಮಾಡಿಸಿದ್ದು, ಮಕ್ಕಳಿಗೂ ತಿಳಿಸಿದ್ದೇನೆ. ಕಳೆದ 15-20 ವರ್ಷದಿಂದ ನನ್ನ ಜತೆಗಿರುವವರಿಗೆ ಒಂದೊಂದು ನಿವೇಶನ ಕೊಟ್ಟಿದ್ದೇನೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ ‘ ಎಂದು ಸಾವಿರಾರು ಕೋಟಿ ರೂ. ಆಸ್ತಿಯ ಒಡೆಯ ಮುತ್ತಪ್ಪ ರೈ ಹೇಳಿಕೊಂಡಿದ್ದರು.