ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನೃಸಿಂಹವಾಡಿಯ ವೇದಮೂರ್ತಿ ಶ್ರೀಅವಧೂತ ಬೋರಗಾಂವಕರ ಅವರ ನೇತೃತ್ವದಲ್ಲಿ ಪೀಠಾರೋಹಣ ಧೀಕ್ಷಾ ಕಾರ್ಯಕ್ರಮವು ವಿಧಿವತ್ತಾಗಿ ನೆರವೇರಿತು.
ಬೆಳಿಗ್ಗೆ ಕೆಳಗಿನಮಠದಲ್ಲಿ ಸನ್ನಿಧಿಗೆ ವಿಶೇಷ ಪೂಜೆಗಳು ನೆರವೇರಿದ ನಂತರ ಮೇಲಿನಮಠದಲ್ಲಿ ಸೌರಯಾಗ ಹೋಮದೊಂದಿಗೆ ಶ್ರೀಮಠದ ಸಂಪ್ರದಾಯದಂತೆ ಮತ್ತು ವಿವಿಧ ವಿಧಿವಿಧಾನಗಳೊಂದಿಗೆ ಉಭಯ ಶ್ರೀಗಳಿಗೆ ಧೀಕ್ಷೆಯನ್ನು ಪ್ರಧಾನ ಮಾಡಿದರು.
ಧೀಕ್ಷೆ ಸ್ವೀಕರಿಸಿದ ಶ್ರೀಗಳು ಮೇಲಿನ ಮಠದಿಂದ ಕೆಳಗಿನ ಮಠದವರೆಗೆ ಅಲಂಕೃತ ಅಶ್ವದ ಮೇಲೆ ಆಗಮಿಸಿದರು. ಉಭಯ ಶ್ರೀಗಳು ಬರುವ ದಾರಿಯುದ್ದಕ್ಕೂ ಸೇರಿದ ಭಕ್ತರು ಪುಷ್ಪಗಳನ್ನು ಅರ್ಪಿಸಿದರು.
ಕೆಳಗಿನ ಮಠದಲ್ಲಿ ಭಕ್ತರಿಗೆ ದರ್ಶನವನ್ನು ನೀಡಿ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರು ಮಾತನಾಡಿ ‘ಉಜ್ವಲ ಪರಂಪರೆಯನ್ನು ಹೊಂದಿರುವ ಶಿವಬೋಧರಂಗ ಮಠದ ಧಾರ್ಮಿಕ ಆಚರಣೆ ಹಾಗೂ ಸಂಪ್ರದಾಯಗಳನ್ನು ಶ್ರದ್ಧಾಭಕ್ತಿಯಿಂದ ಮುಂದುವರಿಸಿಕೊಂಡು ಹೋಗುವ ಸಂಕಲ್ಪ ನಮ್ಮದಾಗಿದೆ’ ಎಂದರು.
ಪೂಜ್ಯ ತಂದೆಯವರಾದ ಶ್ರೀಪಾದಬೋಧ ಸ್ವಾಮೀಜಿಯವರ ಸಂಕಲ್ಪ ಮತ್ತು ಅವರ ನಡೆ, ನುಡಿಗಳನ್ನು ಪಾಲಿಸಿಕೊಂಡು ಶ್ರೀಮಠದ ಭಕ್ತರ ಆಶಯಗಳನ್ನು ಈಡೇರಿಸುವುದು ಮತ್ತು ಸಮಾಜಮುಖಿಯಾಗಿ ಕಾರ್ಯಗಳನ್ನು ಮಾಡಿಕೊಂಡು ಬರುವ ದ್ಯೇಯವು ನಮ್ಮದಾಗಿದೆ’ ಎಂದರು.
ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಭಕ್ತರು ನೂತನ ಉಭಯ ಶ್ರೀಗಳಿಂದ ಆಶೀರ್ವಾದವನ್ನು ಪಡೆದುಕೊಂಡರು. ಮೇಲಿನ ಮಠದಲ್ಲಿ ಏರ್ಪಡಿಸಿದ್ದ ಅನ್ನಸಂತರ್ಪಣೆಯಲ್ಲಿ ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಎಲ್ಲ ಸಮುದಾಯದ ಜನರು ಭಾಗವಹಿಸಿದ್ದು ಶ್ರೀಮಠವು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು.
ಉಚಿತ ಮಾಸ್ಕ್: ಕೋವಿಡ್ ನಿಯಂತ್ರಣ ಮತ್ತು ಸರ್ಕಾರದ ನಿಯಮಗಳ ಪಾಲನೆಯನ್ನು ಅಚ್ಚುಕಟ್ಟಾಗಿ ಮಾಡಿದ್ದು ಗಮನಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರೆಲ್ಲರಿಗೆ ಪ್ರವೇಶ ಸ್ಥಳದಲ್ಲಿ ಉಚಿತ ಮಾಸ್ಕ್‍ಗಳನ್ನು ನೀಡಿದರು, ಆಶಾ ಕಾರ್ಯಕರ್ತೆಯರು ಮತ್ತು ಕರುನಾಡು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಭಕ್ತರು ಪರಸ್ಪರ ಅಂತರ ಕಾಯುವುದಕ್ಕೆ ನಿಗಾವಹಿಸಿದ್ದರು. ಈ ಸಂಧರ್ಭದಲ್ಲಿ ಅರಭಾಂವಿ ಶಾಸಕರಾದ ಭಾಲಚಂದ್ರ ಲ ಜಾರಕಿಹೊಳಿ ಇವರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ ಮತ್ತು ಊರಿನ ಗಣ್ಯರು ಮತ್ತು ಪಟ್ಟಣದ ಸುತ್ತಮುತ್ತಲಿನ ಭಕ್ತರು ಭಾಗವಹಿದರು.