ಮೂಡಲಗಿ: ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಗೋವುಗಳಿಗೆ ವಿಶಿಷ್ಠವಾದ ಸ್ಥಾನವಿದೆ, ಗ್ರಾಮೀಣ ಪ್ರದೇಶದಲ್ಲಿ ಗೋವುಗಳು ರೈತರ ಜೀವನಾಧಾರವಾಗಿದೆ. ದೇಶಿಯ ಗೋ ತಳಿಗಳನ್ನು ಉಳಿಸಿ ಬೆಳೆಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ನ.05 ರಂದು ಕಲ್ಲೋಳಿ ಪಟ್ಟಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಮಾರುತಿ ದೇವರ ದೇವಸ್ಥಾನದಲ್ಲಿ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋ ಪೂಜೆಯನ್ನು ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಗೋವುಗಳ ಸಂತತಿಯನ್ನು ನಾವು ಬೆಳೆಸಬೇಕಾದರೆ ಮೊದಲು ಗೋವುಗಳನ್ನು ಉಳಿಸುವುದು ಮುಖ್ಯವಾಗಿದೆ ಎಂದರು.
ಗೋವುಗಳ ಮಹತ್ವ ಹಾಗೂ ಗೋವುಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಗೋಮಾತೆಯನ್ನು ಪೂಜಿಸುವ ಇಲಾಖೆಯ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದರು.
ರಾಜ್ಯ ಸರ್ಕಾರ ಕರ್ನಾಟಕ ಗೋ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಗೋವುಗಳ ರಕ್ಷಣೆಯ ದೃಷ್ಠಿಯಲ್ಲಿ ಪ್ರಮುಖವಾದ ನಿರ್ಧಾರವನ್ನು ಕೈಗೊಂಡಿದೆ. ಆ ಮೂಲಕ ಗೋವುಗಳನ್ನು ಕಸಾಯಿಖಾನೆಗೆ ದೂಡುವಂತಹ ಕೃತ್ಯಕ್ಕೆ ಕಡಿವಾಣ ಹಾಕಿ ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ಸಿ.ಡಿ.ಪಿ.ಒ ವೈ.ಎ. ಗುಜನಟ್ಟಿ, ಸೋಮಶೇಖರ ಮಗದುಮ್ಮ, ಬಸವರಾಜ ಹುಳ್ಳೇರ, ಗ್ರಾಮದ ಪ್ರಮುಖರಾದ ಪರಪ್ಪ ಕಡಾಡಿ, ರಾಜಪ್ಪ ಗೋಸಬಾಳ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಂಕರ ಗೋರೋಶಿ, ಅಡಿವೆಪ್ಪ ಕುರಬೇಟ, ಸಿದ್ದಣ್ಣ ಹೆಬ್ಬಾಳ, ಈರಣ್ಣ ಮುನ್ನೋಳಿಮಠ, ಮಹಾದೇವ ಮದಭಾಂವಿ, ಭೀಮಶೆಪ್ಪ ಕಡಾಡಿ, ಮಂಜುಳಾ ಹಿರೇಮಠ, ಕೆಂಪಣ್ಣ ಮಕ್ಕಳಗೇರಿ, ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.