ಮೂಡಲಗಿ – ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೇಳುವ ತಮ್ಮ ನ್ಯಾಯಯುತ ಬೇಡಿಕೆ ಬೇಗನೆ ಈಡೇರಿಸಬೇಕೆಂದು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಆಗಮಿಸಿದ್ದ ಸಿಎಂ ಅವರಿಗೆ ಪಂಚಮಸಾಲಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.
̺ಕೃಷಿ ಕುಟುಂಬದಿಂದ ಬಂದಿರುವ ಪಂಚಮಸಾಲಿ ಲಿಂಗಾಯತ ಸಮುದಾಯವು ಶೈಕ್ಷಣಿಕ ವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದ ಸಮಾಜವಾಗಿದ್ದು ಕೂಡಲಸಂಗಮ ಪ್ರಥಮ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ.
ಈಗಾಗಲೇ ಕೂಡಲಸಂಗಮದಿಂದ ಬೆಂಗಳೂರು ವರೆಗೆ ಪಂಚಲಕ್ಷ ಹೆಜ್ಜೆ ಎಂಬ ಪಾದಯಾತ್ರೆ ಮಾಡಿ, ಸರ್ಕಾರದಿಂದ ಬೇಡಿಕೆಯನ್ನು ಈಡೇರಿಸುವ ಭರವಸೆ ದೊರಕಿದ ಹಿನ್ನೆಲೆಯಲ್ಲಿ ಸಮಾಜದ ಪೀಠಾಧಿಪತಿಗಳು, ಮುಖಂಡರು ಕೈಗೊಂಡಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಮುಖ್ಯಮಂತ್ರಿಗಳಿಗೆ ನೀಡಲಾದ ಮನವಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ದು ಸಚಿವ ಮುರುಗೇಶ ನಿರಾಣಿಯವರನ್ನು ಸಮಾಜದ ಮುಖಂಡರು ಕಡೆಗಣಿಸಿ ಸಿಎಂ ಅವರಿಗೆ ಮನವಿ ಸಲ್ಲಿಸಿದ್ದು ಕಂಡು ಬಂದಿತು.
ನಿಂಗಪ್ಪ ಫಿರೋಜಿ, ಬಸವರಾಜ ಪಾಟೀಲ ,̺ ದೀಪಕ ಝುಂಜರವಾಡ, ಮಲ್ಲು ಗೋಡಿಗೌಡರ,̺ ಹಾಗೂ ಸಮಾಜದ ಇನ್ನುಳಿದ ಮುಖಂಡರು ಉಪಸ್ಥಿತರಿದ್ದರು.
ವರದಿ: ಈಶ್ವರ ಡವಳೇಶ್ವರ