ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಾ.28 ರಿಂದ ಆರಂಭವಾಗಲಿರುವ ಪ್ರಸಕ್ತ ವರ್ಷ 157 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 44780 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಮಹೋನಕುಮಾರ ಹಂಚಾಟೆ ಹೇಳಿದರು.
ಇಲ್ಲಿನ ಡಿಡಿಪಿಐ ಕಚೇರಿಯಲ್ಲಿ ಗುರುವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಾ.28 ರಿಂದ ಏ.11ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 2356 ಕೊಠಡಿಗಳಲ್ಲಿ 23514 ವಿದ್ಯಾರ್ಥಿಗಳು ಮತ್ತು 21266 ವಿದ್ಯಾರ್ಥಿನಿಯರು ಸೇರಿ ಒಟ್ಟು 44780 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯ ಹೋಗಲಾಡಿಸಿ ದೈರ್ಯದಿಂದ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಮಾಡಲಾಗಿದೆ. ಪರೀಕ್ಷೆಗೆ ಬೇಕಾದ 4507 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಪರೀಕ್ಷೆ ಸಮಯದಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಸಹಾಯಕರನ್ನು ನಿಯೋಜನೆ ಮಾಡಲು ಆರೋಗ್ಯ ಇಲಾಖೆಗೆ ಕೋರಲಾಗಿದೆ ಎಂದರು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ
ಅಳವಡಿಸಲಾಗಿದೆ. ಮಾಸ್ಕ ಮತ್ತು ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ ಕೇವಲ 20 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರನ್ನು ಮತ್ತು ಕಸ್ಟೋಡಿಯನ್ ಹಾಗೂ ಮಾರ್ಗಾಧಿಕಾರಿಗಳನ್ನು ಮತ್ತು ಸ್ಥಾನಿಕ ಜಾಗೃತ ದಳ ನೇಮಕ ಮಾಡಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರದ ಸುತ್ತ 144 ಕಲಂ ಜಾರಿಗೊಳಿಸಳಾಗಿದೆ. ಬಿಗಿ ಪೊಲೀಸ ಬಂದೋಬಸ್ತ್
ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ವಿಷಯ ಪರಿವೀಕ್ಷಕ ಅರಿಹಂತ ಬಿರಾದಾರ, ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ, ಎಸ್.ಎಸ್.ದುಪದಾಳ
ಮುಂತಾದವರು ಉಪಸ್ಥಿತರಿದ್ದರು.