ಗುರುವಾರ , ನವೆಂಬರ್ 21 2024
kn
Breaking News

ರೈತರಿಂದ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ತೀರ್ಮಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಬೆಂಗಳೂರು : ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಮುಂದಾಗಿರುವ ಕೆಎಂಎಫ್, ಪ್ರತಿ ಟನ್‍ಗೆ 15 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆದೇಶದ ಮೇರೆಗೆ ರೈತರ ಅನುಕೂಲಕ್ಕಾಗಿ ಮೆಕ್ಕಜೋಳ ಖರೀದಿಗೆ ನಮ್ಮ ಸಂಸ್ಥೆ ಮುಂದಾಗಿದ್ದು, ಅಂದಾಜು 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸಲು ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ವರ್ಷವೂ ಸಹ ಡಿಸೆಂಬರ್-ಜನೇವರಿ ತಿಂಗಳ ಅಂತ್ಯದವರೆಗೆ ಬೇಕಾಗುವ ಪ್ರಮಾಣದ ಮೆಕ್ಕೆಜೋಳದ ಖರೀದಿಗೆ ವ್ಯವಸ್ಥೆ ಮಾಡಲಾಗುವುದು. ವಾರ್ಷಿಕ ಅವಶ್ಯಕ ಪ್ರಮಾಣವನ್ನು ಮೆಕ್ಕೆಜೋಳದ ಸುಗ್ಗಿ ಕಾಲದಲ್ಲಿ ಅಂದರೆ ಅಕ್ಟೋಬರ್‍ದಿಂದ ಫೆಬ್ರುವರಿ ತಿಂಗಳಲ್ಲಿ ಖರೀದಿಸಿ ದಾಸ್ತಾನು ಮಾಡಿಕೊಳ್ಳುವುದು ವಾಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳದ ದರ ಕುಸಿತಕ್ಕೆ ಕಂಡಿರುವುದರಿಂದ ಕೆಎಂಎಫ್ ರೈತರ ನೆರವಿಗೆ ಮುಂದೆ ಬಂದು ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ 51,259 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ಖರೀದಿ ಮಾಡಲಾಗಿತ್ತು ಎಂದು ಅವರು ಹೇಳಿದರು. ಕೋವಿಡ್ ಇನ್ನೂ ಮುಂದುವರೆದಿರುವುದರಿಂದ ರೈತರ ನೆರವಿಗೆ ಕೆಎಂಎಫ್ ಧಾವಿಸಿದ್ದು, ಮತ್ತೇ ಮೆಕ್ಕೆಜೋಳವನ್ನು ರೈತರಿಂದಲೇ ನೇರವಾಗಿ ಖರೀದಿಸಲು ತೀರ್ಮಾನಿಸಿದೆ ಎಂದು ಹೇಳಿದರು.
ಕೆಎಂಎಫ್‍ನ 5 ಪಶು ಆಹಾರ ಘಟಕಗಳಿಂದ ವಾರ್ಷಿಕ 6.5 ರಿಂದ 7.0 ಲಕ್ಷ ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಪಶು ಆಹಾರ ಉತ್ಪಾದನೆಗೆ ವಾರ್ಷಿಕ ಸರಾಸರಿ 2.20 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ಮೆಕ್ಕೆ ಜೋಳ ಅವಶ್ಯಕತೆ ಇದ್ದು, ನಂದಿನಿ ಗೋಲ್ಡ್ ಪಶು ಆಹಾರದಲ್ಲಿ ಶಕ್ತಿಯ ಪ್ರಮಾಣವನ್ನು ಹೆಚ್ಚಿಸಲು ಶೇ 35 ರಷ್ಟು ಮೆಕ್ಕೆಜೋಳವನ್ನು ಉಪಯೋಗಿಸಲಾಗುತ್ತಿದೆ. ಮೆಕ್ಕೆಜೋಳದಲ್ಲಿ ಸ್ಟಾರ್ಚ್, ಟಿಡಿಎನ್, ಜಿಡ್ಡಿನಾಂಶ, ಪ್ರೋಟಿನ್, ಅಂಶಗಳಿದ್ದು, ನಿಧಾನವಾಗಿ ಜೀರ್ಣವಾಗುವುದರಿಂದ ರಾಸುಗಳಿಗೆ ದೀರ್ಘಾವಧಿಗೆ ಶಕ್ತಿಯನ್ನು ನೀಡುವುದರ ಮೂಲಕ ಅಧಿಕ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ. ರೇವಣ್ಣ, ಶಾಸಕ ಭೀಮಾನಾಯ್ಕ, ಆಡಳಿತ ಮಂಡಳಿಯ ಸದಸ್ಯರಾದ ಹಿರೇಗೌಡರ, ಕಾ.ಪು. ದಿವಾಕರಶೆಟ್ಟಿ, ಮಾರುತಿ ಕಾಶೆಂಪೂರ, ಶ್ರೀಶೈಲಗೌಡ ಪಾಟೀಲ, ಸಿ.ವೀರಭದ್ರಬಾಬು, ವಿಶ್ವನಾಥ, ನಂಜುಂಡಸ್ವಾಮಿ, ಸಿ.ಶ್ರೀನಿವಾಸ, ಆನಂದಕುಮಾರ, ಕೆ.ಎಸ್. ಕುಮಾರ, ಅಮರನಾಥ ಜಾರಕಿಹೊಳಿ, ಪ್ರಕಾಶ, ಪಶು ಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಮುಂತಾದವರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್ : ಬೆಂಗಳೂರು 1 : ಇಲ್ಲಿನ ಕೆಎಂಎಫ್ ಪ್ರಧಾನ ಕಾರ್ಯಾಲಯದಲ್ಲಿ ಮಂಗಳವಾರದಂದು ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಶಾಸಕ ಭೀಮಾನಾಯ್ಕ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page