ಹಳ್ಳೂರ : ನಮ್ಮ ದೇಶದಲ್ಲಿ ಮಹಾಮಾರಿಯಾಗಿ ಬಂದಿರುವ ಕೊರೋನಾ ವೈರಸ್ ಹರಡದಂತೆ ತಡೆಯಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತ ಕೆಲಸ ಮಾಡುತ್ತಿರುವ ನಮ್ಮ ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನಾವು ಅಭಿನಂದನೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕೆಂದು ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಉಪಾಧ್ಯಕ್ಷ ಬಸಪ್ಪ ಸಂತಿ ಹೇಳಿದರು.
ಶನಿವಾರದಂದು ಸ್ಥಳೀಯ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಿಂದ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಸಹಾಯಧನ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಒಬ್ಬಳು ತಾಯಿ ತನ್ನ ಮಗನನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು, ಮಗುವಿನ ರಕ್ಷಣೆ ಮಾಡುವ ಮೂಲಕ ಒಬ್ಬ ವಿದ್ಯಾವಂತನಾಗಿ ಮಾಡುತ್ತಾಳೆ, ಆದರೆ ಈ ಮಹಾಮಾರಿ ಕೊರೊನಾದಿಂದ ಇಡೀ ನಮ್ಮ ದೇಶದ ಜನತೆಯನ್ನು ರಕ್ಷಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ಆಶಾ ಕಾರ್ಯಕರ್ತೆಯರು ನಮ್ಮ ದೇಶವನ್ನು ರಕ್ಷಿಸುವ ತಾಯಂದಿಯರ ಸೈನ್ಯಪಡೆ ಎಂದು ಕರೆದರೂ ತಪ್ಪಾಗಲಾರದು ಎಂದು ಹೇಳಿದರು.
ಗ್ರಾಮೀಣ ಮಟ್ಟದಲ್ಲಿ ಇರುವ ನಮ್ಮ ಸೊಸೈಟಿ ಒಳ್ಳೆಯ ಸಮಾಜದ ಕೆಲಸಗಳಿಗೆ ನಮ್ಮ ಸೊಸೈಟಿಯಿಂದ ಅನೇಕ ಅಭಿವೃದ್ಧಿ ಕೆಲಸ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ ಇದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆ ವತ್ಸಲಾ ಹಿರೇಮಠ್ ಮಾತನಾಡಿ, ಸರಕಾರ ಕೊಡುವ ಅಲ್ಪ ಗೌರವ ಧನದಲ್ಲಿಯೆ ಬದುಕು ಸಾಗಿಸಲು ನಮ್ಮ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಕಷ್ಟವಾಗಿದ್ದರೂ ತುರ್ತು ಸಂಧರ್ಭದಲ್ಲಿ ನಮ್ಮ ಮನೆಯ ಕೆಲಸಗಳನ್ನು ಬಿಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ, ಅದನ್ನು ಗುರುತಿಸಿ ನಮಗೆ ಪ್ರೋತ್ಸಾಹಧನವನ್ನು ನೀಡುತ್ತಿರುವ ಇಂತಹ ಸಂಸ್ಥೆಗಳಿಗೆ ನಮ್ಮ ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಕುಮಾರ ಲೋಕನ್ನವರ, ಸದಸ್ಯರಾದ ಹಣಮಂತ ತೇರದಾಳ,ಶಂಕರ ಬೋಳನ್ನವರ, ನಿಂಗಪ್ಪ ಸುಣಧೋಳಿ, ಶಂಕ್ರಯ್ಯಾ ಹಿರೇಮಠ್, ಮಹೇಶ್ ನಾಶಿ, ಅಪ್ಪಾಸಾಬ ಮುಜಾವರ, ಬಸಪ್ಪ ತಳವಾರ, ಹಾಗೂ ಸೊಸೈಟಿಯ ಸಿಬ್ಬಂದಿಗಳಾದ ಕೆಂಪಣ್ಣ ಹುಬ್ಬಳ್ಳಿ, ರಾಮಪ್ಪ ಸುಣಧೋಳಿ, ಶ್ರೀಶೈಲ್ ತಳವಾರ, ರಮೇಶ್ ಸಂತಿ, ಸಿದ್ದಯ್ಯ ಹಿರೇಮಠ್, ಲಕ್ಷ್ಮಣ ದಾಸರ, ಸಿದ್ದಪ್ಪ ಪಾಲಭಾಂವಿ, ಅನಿಲ್ ಪಾಲಭಾಂವಿ, ಶಂಕರ್ ಉಳ್ಳಾಗಡ್ಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು