ಕೊರೋನಾ ವಿರುದ್ಧ ತೊಡೆತಟ್ಟಿದ ಗ್ರಾಮ!
ಸಂಬರಗಿ:- ಜಗತ್ತಿನಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನಾ ವಿರುದ್ದ ದೇಶಾದ್ಯಂತ ಎಲ್ಲೇಡೆ ಲಾಕ್ ಡೌನ್ ಘೋಷಣೆಯಾಗಿ ಒಂದು ವಾರ ಕಳೆದಿದೆ.
ಕೇಂದ್ರ ಹಾಗೂ ರಾಜ್ಯಚ ಸರ್ಕಾರಗಳೂ ಸಹ ಸಾರ್ವಜನಿಕರಿಗೆ ಈ ಕೊರೋನಾ ವೈರಾಣುವಿನ ಭೀಕರತೆ ಹಾಗೂ ಅದರಿಂದಾಗುವ ಜೀವಹಾನಿಯ ಬಗ್ಗೆ ನಿರಂತರವಾಗಿ ಮುಂಜಾಗ್ರತಾ ಕ್ರಮ ಹಾಗೂ ಕೊರೋನಾ ವೈರಾಣು ಹರಡದಂತೆ ಪಾಲಿಸಬೇಕಾದ ಕ್ರಮಗಳ ಕುರಿತಾದ ಸಂದೇಶಗಳನ್ನು ನೀಡತ್ತಲೇ ಇವೆ.
ಅದರಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಮ ಮಟ್ಟದಲ್ಲೂ ಸಹ ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಗಡಿ ಭಾಗದ ಗ್ರಾಮ ಸಂಬರಗಿ ಗ್ರಾಮದಲ್ಲೂ ಸಹ ಕೊರೋನಾ ರೋಗದ ವಿರುದ್ದ ಜಾಗೃತಿ ಮೂಡಿಸುವ ಕಾರ್ಯ ಹಾಗೂ ಆ ರೋಗ ಬಾರದಂತೆ ತಡೆಯುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸತತವಾಗಿ ಗ್ರಾಮ ಪಂಚಾಯಿತಿಯು ಕರೆ ನೀಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.
ಸೂರ್ಯದಯದಿಂದ ಸೂರ್ಯಾಸ್ತದವರೆಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರೂ ಸೇರಿದಂತೆ ಗ್ರಾಮದ ಪ್ರತಿಯೊಂದು ಬೀದಿ ಬೀದಿಯೂ ಸುತ್ತಾಡಿ ಸಿಬ್ಬಂದಿ ದೇವೇಂದ್ರ ಮೈಕ್ ಹಿಡಿದು ನಿರಂತರ ಪ್ರಕಟಣೆ ನೀಡುತ್ತಾ ಕೊರೋನಾ ವಿರುದ್ದ ಎಚ್ಚರಿಕೆಯ ಹೆಜ್ಜೆಗಳನ್ನಿಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅಷ್ಟೇ ಅಲ್ಲದೇ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಹಾದೇವ ತಾನಗೆ ನೇತೃತ್ವದಲ್ಲಿ ಗ್ರಾಮಸ್ಥರ ಆರೋಗ್ಯದ ಹಿತ ದೃಷ್ಟಿಯಿಂದ ಗ್ರಾಮದ ಎಲ್ಲ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆ ಕಾರ್ಯ ಭರದಿಂದ ಸಾಗಿದೆ.
ಈ ಸಂದರ್ಭದಲ್ಲಿ ಸರ್ವವಾಣಿಯೊಂದಿಗೆ ಅಧ್ಯಕ್ಷರಾದ ಮಹಾದೇವ ತಾನಗೆ ಅವರು “ಕೊರೋನಾ ಇದು ಮಾನವಕುಲಕ್ಕೆ ಬಂದೊದಗಿದ ಸಂಕಷ್ಟವಾಗಿದೆ ಇದರಿಂದ ರಕ್ಷಣೆ ಪಡೆಯಲು ಎಲ್ಲರೂ ಮನೆಯಲ್ಲಿರುವುದೇ ಉತ್ತಮವಾಗಿದೆ ರಾಜ್ಯ ಸರ್ಕಾರದ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯಕವಾಗಿದೆ ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ನಾವಿದೀವಿ ಸಹಜವಾಗಿ ಜನರಲ್ಲಿ ಆತಂಕವಿದೆ ಅದು ದೂರಾಗಬೇಕು ಯಾರೂ ಭಯಪಡಬೇಡಬಾರದು ಅಲ್ಲದೇ ತುರ್ತಿನ ಸಂದರ್ಭದಲ್ಲಿ ಮಾತ್ರ ಹೊರಗಡೆ ಬನ್ನಿ ಅನಾವಶ್ಯಕವಾಗಿ ಯಾರೂ ಓಡಾಡದಂತೆ ಮನವಿಮಾಡಿಕೊಂಡ ಅವರು ಸರ್ಕಾರದ ಮನವಿಗಳನ್ನು ತಿರಸ್ಕರಿಸಿ ಕೊರೋನಾವನ್ನು ಆಹ್ವಾನಿಸುವ ಮನಸ್ಥಿತಿಯ ಜನರ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.
ಪೋಲಿಸರು ಸಹ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಆದರೂ ಕೂಡಾ ಬುದ್ದಿ ಕಲಿಯದ ಜನರಿಗೆ ಸೇನೆಯ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಇದುವರೆಗೆ ಬೆಳಗಾವಿಯ ಕಡೆ ಮುಖಮಾಡದ ಕೊರೋನಾ ಈಗ ಈ ಕಡೆಯೂ ಕಾಲಿಟ್ಟಿದ್ದು ಜನರು ಇನ್ನಷ್ಟು ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಿಕೊಂಡರು.
ಅಧ್ಯಕ್ಷರ ಈ ಕಾರ್ಯ ಹಾಗೂ ಕಾಳಜಿಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.