ಶುಕ್ರವಾರ , ಮಾರ್ಚ್ 29 2024
kn
Breaking News

ಅಯೋಧ್ಯೆ ಶ್ರೀರಾಮ ಮಂದಿರ ನೂತನ ಕಟ್ಟಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ.

Spread the love

ಮೂಡಲಗಿ : ಬಹುನಿರೀಕ್ಷಿತ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನೂತನ ಕಟ್ಟಡಕ್ಕೆ ಅರಭಾವಿ ಮತಕ್ಷೇತ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ಸಂಗ್ರಹ ಮಾಡಿಸಿಕೊಡುವುದಾಗಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇಲ್ಲಿಯ ಶಿವಬೋಧರಂಗ ಮಠದಲ್ಲಿ ಸೋಮವಾರದಂದು ಮಹಾ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೂರಾರು ವರ್ಷಗಳ ಭಾರತೀಯರ ಕನಸನ್ನು ಈಡೇರಿಸಿ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ್ 5 ರಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕೋಟ್ಯಾಂತರ ಜನರ ಕನಸು ನನಸು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂದಾಜು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ದೀರ್ಘ ಕಾಲದ ವಿವಾದಗಳ ನಂತರ ಈ ದೇವಾಲಯವು ಸಾರ್ವಜನಿಕರಿಗೆ ಮುಕ್ತವಾಗಿದೆ. ಇದರಿಂದ ಇಡೀ ಭಾರತೀಯರು ಕಂಡ ಕನಸು ನನಸಾದಂತಾಗಿದೆ ಎಂದು ಅವರು ಹೇಳಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅವಿಭಜಿತ ಗೋಕಾಕ ತಾಲೂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿಕೊಡಲಾಗುವುದು. ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲಾಗುವುದು. ಪ್ರತಿಯೊಬ್ಬರೂ ಈ ಪುಣ್ಯದ ಕೆಲಸಕ್ಕೆ ತಮ್ಮ ತನು-ಮನ-ಧನದಿಂದ ನಮ್ಮೊಂದಿಗೆ ಕೈ ಜೋಡಿಸುವಂತೆ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
2019ರ ನವ್ಹೆಂಬರ 9 ರಂದು ವಿವಾದಿತ ಅಯೋಧ್ಯೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದ್ದರಿಂದ ಈ ವಿವಾದಕ್ಕೆ ಅಂತ್ಯ ಕಂಡಂತಾಗಿದೆ. ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತಹ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ಸಾರ್ವಜನಿಕರು ಪ್ರೀತಿ, ಗೌರವದಿಂದ ದೇಣಿಗೆಯನ್ನು ಸಮರ್ಪಣಾ ಮನೋಭಾವನೆಯಿಂದ ನೀಡುತ್ತಿದ್ದಾರೆ. ನಾವು ಕೂಡಾ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮ್ಮ ಅಳಿಲು ಸೇವೆ ಸಲ್ಲಿಸಬೇಕು. ನೀವು ನೀಡುತ್ತಿರುವ ದೇಣಿಗೆ ನೇರವಾಗಿ ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟಿನವರಿಗೆ ಮುಟ್ಟಲಿದೆ. ಎಲ್ಲ ಧರ್ಮಿಯರೂ ಕೂಡ ನೂತನ ಮಂದಿರಕ್ಕೆ ಸಹಾಯ ಸಹಕಾರ ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಭವ್ಯ ಕಟ್ಟಡವನ್ನು ನೋಡುವ ಆಸೆ ಪ್ರತಿಯೊಬ್ಬ ಭಾರತೀಯನಿಗಿದೆ ಎಂದು ಹೇಳಿದರು.
ಅಯೋಧ್ಯೆಗೆ ನಂದಿನಿ ತುಪ್ಪ : ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಪೂಜಾ ಕಾರ್ಯಗಳಿಗಾಗಿ ಕೆಎಂಎಫ್‍ನಿಂದ ನಂದಿನಿ ತುಪ್ಪವನ್ನು ಕಳುಹಿಸಿಕೊಡಲಾಗಿದೆ. ಶ್ರೀರಾಮ ಮಂದಿರದ ನೂತನ ಕಟ್ಟಡದಲ್ಲಿಯೂ ನಮ್ಮ ನಂದಿನಿ ಸೇವೆ ಇದೆ ಎಂದು ಅವರು ಹೇಳಿದರು.
ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಾವೆಲ್ಲರೂ ಪ್ರತಿ ಕುಟುಂಬಗಳನ್ನು ಸಂಪರ್ಕಿಸಿ ದೇಣಿಗೆಯನ್ನು ಸಂಗ್ರಹಿಸಬೇಕು. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ನಮ್ಮ ಕಾರ್ಯಕರ್ತರು ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದಾರೆ. ಯಾರ ಮೇಲೂ ಒತ್ತಡ ಹಾಕದೇ ಸಾರ್ವಜನಿಕರು ಸ್ವ ಇಚ್ಛೆಯಿಂದ ನೀಡುವ ದೇಣಿಗೆಯನ್ನು ಸ್ವೀಕರಿಸಬೇಕು. ಅವರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಎಷ್ಟೋ ವರ್ಷಗಳ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಂತಾಗಿದೆ. ನಿಧಿ ಸಂಗ್ರಹ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ನಿಧಿ ಸಂಗ್ರಹ ಯಶಸ್ವಿಯಾಗಿ ನಿರ್ವಹಿಸುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರೇಯ ಶ್ರೀಪಾದಬೋಧ ಸ್ವಾಮೀಜಿ ಸೇರಿದಂತೆ ಹಲವು ಭಕ್ತರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀಧರ ಸ್ವಾಮೀಜಿ, ತವಗದ ಬಾಳಯ್ಯ ಸ್ವಾಮೀಜಿ, ಜಿಲ್ಲಾ ಸಂಘ ಚಾಲಕ ಹಾಗೂ ನ್ಯಾಯವಾದಿ ಎಂ.ವಾಯ್. ಹಾರುಗೇರಿ, ತಾಲೂಕು ಅಭಿಯಾನ ಸಂಯೋಜಕ ಚೂನಪ್ಪ ಹಟ್ಟಿ, ಭೂಪಾಳ ಖೆಮಲಾಪುರೆ, ಹರೀಶ ಕಾಳೆ, ಸುರೇಶ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಪುರಸಭೆ ಸದಸ್ಯರು ಎಲ್ಲ ಸಮಾಜಗಳ ಮುಖಂಡರುಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page