ಗುರುವಾರ , ಮಾರ್ಚ್ 28 2024
kn
Breaking News

ಬಿಡಿಸಿಸಿ ಬ್ಯಾಂಕಿನಿಂದ ರೈತರ ಆರ್ಥಿಕಾಭಿವೃದ್ಧಿಗೆ ಹೊಸ ಯೋಜನೆಗಳು ಅನುಷ್ಠಾನಗೊಳ್ಳಲಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ : ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಬಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಡಿಸಿಸಿ ಬ್ಯಾಂಕಿನ ನೂತನ ಆಡಳಿತ ಮಂಡಳಿಗೆ ಸಲಹೆ ಮಾಡಿದರು.
ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾದ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೋಕಾಕ ನಿವಾಸಕ್ಕೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಸತ್ಕಾರ ಮಾಡಿದ ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಆರ್ಥಿಕಾಭಿವೃದ್ಧಿ ಸುಧಾರಣೆಗಾಗಿ ಬ್ಯಾಂಕು ಕೆಲಸ ನಿರ್ವಹಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಅವರು ಹೇಳಿದರು.
ಬಿಡಿಸಿಸಿ ಬ್ಯಾಂಕು ಕರ್ನಾಟಕದಲ್ಲಿಯೇ ಪ್ರತಿಷ್ಠಿತ ಬ್ಯಾಂಕ ಆಗಿದೆ. ಸಹಕಾರಿ ಕ್ಷೇತ್ರದಲ್ಲಿ ಮಿಂಚುತ್ತಿರುವ ಈ ಬ್ಯಾಂಕಿನ ಸುಧಾರಣೆಗಾಗಿ ಹೊಸ ಆಡಳಿತ ಮಂಡಳಿ ಹಲವಾರು ರೈತ ಪರ ಯೋಜನೆಗಳನ್ನು ಜಾರಿಗೊಳಿಸಲಿ. ಬ್ಯಾಂಕಿನ ಹೊಸ ಮಂಡಳಿ ನೌಕರರು ಹಾಗೂ ರೈತರ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಲಿ. ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷ ರಮೇಶ ಕತ್ತಿ ಅವರು ಕರ್ತವ್ಯ ನಿರ್ವಹಿಸಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ ಎಂದು ಅವರು ಹೇಳಿದರು.
ಕುತೂಹಲ ಕೆರಳಿಸಿದ್ದ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ರಮೇಶ ಕತ್ತಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಸುಭಾಸ ಢವಳೇಶ್ವರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಹಿರಿಯ ಬಿಜೆಪಿ ನಾಯಕ ಉಮೇಶ ಕತ್ತಿ ಮತ್ತು ನಾವೆಲ್ಲರೂ ಸೇರಿಕೊಂಡು ಬ್ಯಾಂಕಿನ ಇತಿಹಾಸದಲ್ಲಿಯೇ 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳಿಗೆ ಆಸ್ಪದ ಬರದ ರೀತಿಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೂಡಿಕೊಂಡು ಸರ್ವ ಸಮ್ಮತದಿಂದ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಿಂದ ನಿಭಾಯಿಸಿದ್ದೇವೆ. ಜೊತೆಗೆ ನಮ್ಮ ಪಕ್ಷದ ವರಿಷ್ಠರು ನೀಡಿದ ಆದೇಶವನ್ನು ಪರಿಪಾಲನೆ ಮಾಡಿದ್ದೇವೆ. ರೈತರ ಶ್ರೇಯೋಭಿವೃದ್ಧಿಯೇ ಬಿಡಿಸಿಸಿ ಬ್ಯಾಂಕಿನ ಗುರಿಯಾಗಿರಬೇಕೆಂದು ಹೇಳಿದರು. ಬ್ಯಾಂಕಿನ ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಕತ್ತಿ ಅವರ ನೇತೃತ್ವದಲ್ಲಿ ಬಿಡಿಸಿಸಿ ಬ್ಯಾಂಕು ಉತ್ತುಂಗಕ್ಕೇರಲಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಆಶಿಸಿದರು.
ಅಧ್ಯಕ್ಷ ಮತ್ತು ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಹಿರಿಯರ ಸಹಕಾರದಿಂದ ಬ್ಯಾಂಕಿನ ನಿರ್ದೇಶಕರ ಒಮ್ಮತದಿಂದ ಬ್ಯಾಂಕಿನ ಆಡಳಿತ ಚುಕ್ಕಾಣಿಯನ್ನು ವಹಿಸಿಕೊಂಡಿದ್ದೇನೆ. ಆಡಳಿತ ಮಂಡಳಿಯ ಸಹಕಾರದಿಂದ ಬಿಡಿಸಿಸಿ ಬ್ಯಾಂಕಿನ ಗ್ರಾಹಕರ ಸಂಖ್ಯೆಯನ್ನು ಏರಿಸುವ ಗುರಿಯನ್ನು ಹೊಂದಿದ್ದೇನೆ. ಜೊತೆಗೆ 10 ಸಾವಿರ ಕೋಟಿ ರೂ.ವರೆಗಿನ ಆರ್ಥಿಕ ವ್ಯವಹಾರವನ್ನು ಮುಟ್ಟಿಸುವ ಸಂಕಲ್ಪ ನಮ್ಮದಾಗಿದೆ. ಶತಮಾನದ ಅಂಚಿನಲ್ಲಿರುವ ಬಿಡಿಸಿಸಿ ಬ್ಯಾಂಕಿನ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲವರ್ಧನೆಗೆ ಕ್ರಮ ಕೈಗೊಳ್ಳುತ್ತೇನೆ. ಜಾರಕಿಹೊಳಿ ಸಹೋದರರು, ಡಿಸಿಎಂ ಲಕ್ಷ್ಮಣ ಸವದಿ, ಹಿರಿಯ ಶಾಸಕ ಉಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಬಿಡಿಸಿಸಿ ಬ್ಯಾಂಕನ್ನು ರಾಜ್ಯದಲ್ಲಿಯೇ ನಂ.1 ಬ್ಯಾಂಕನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆಂದು ಕತ್ತಿ ಹೇಳಿದರು.
ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅವರು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಉಪಾಧ್ಯಕ್ಷ ಬಸಗೌಡ ಪಾಟೀಲ(ನಾಗನೂರ), ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಮುಖಂಡ ಸುರೇಶ ಬೆಲ್ಲದ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page